ಜಿಲ್ಲೆ

ಶರಣು ವಿಶ್ವವಚನ ಫೌಂಡೇಷನ್‌ನಿಂದ ಮೈಸೂರಿನಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

ಮೈಸೂರು: ಜ್ಞಾನದ ಬೆಳಕನ್ನು ಕಾಣಲು ವಚನಗಳು ಸಹಾಯಕವಾಗಿವೆ ಎಂದು ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿ ಎಚ್.ಆರ್. ಉಮೇಶ್ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ನಗರದ ಸೋಲಿಗರ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮತ್ತು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿ ಜ್ಞಾನ ಹಾಗೂ ಪರಿಜ್ಞಾನಗಳ ಸಂಗಮದಿಂದ ಸುಜ್ಞಾನ ಉಂಟಾಗುತ್ತದೆ. ಸುಜ್ಞಾನದಿಂದ ವಿಶ್ವಮಾನವ ಪರಿಕಲ್ಪನೆ ಬೆಳೆದು ಸುತ್ತಮುತ್ತಲಿನ ವಾತಾವರಣವೂ ಕೂಡಾ ಸಂತೋಷವಾಗಿರುತ್ತದೆ ಎಂದರು.

ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಕಲ್ಯಾಣಿ ನಟರಾಜಪ್ಪ ಮಾತನಾಡಿ, ವಚನಗಳನ್ನು ಕಲಿತ ನಂತರ ಅವುಗಳನ್ನು ನಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಂಡರೆ ವ್ಯಕ್ತಿತ್ವ ವಿಕಾಸವಾಗುತ್ತದೆ. ದೇಶದ ಭವಿಷ್ಯ ತರಗತಿಯಲ್ಲಿ ರೂಪುಗೊಳ್ಳುತ್ತದೆ. ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆಯ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸಲು ಮುಂದಾಗುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ನಂತರ ಎಲ್ಲ ವಿದ್ಯಾರ್ಥಿಗಳಿಗೆ ಬ್ಯಾಗ್, ವಚನ ದೀವಿಗೆ ಪ್ರಮಾಣಪತ್ರ ಮತ್ತು ವಚನ ಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಮುಖ್ಯಶಿಕ್ಷಕಿ ಭಾರತಿ, ಸಹಶಿಕ್ಷಕ ಎಂ. ರಮೇಶ್, ರಶ್ಮಿ ಉಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್ ಹಾಗೂ ಇತರರು ಇದ್ದರು.