| ಅರವಿಂದ ಅಕ್ಲಾಪುರ ಶಿವಮೊಗ್ಗ
ಕರೊನಾ ಕಾರಣದಿಂದ ರಾಜ್ಯದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳ ಚುನಾವಣೆಗೆ ಡಿಸೆಂಬರ್ ಅಂತ್ಯದವರೆಗೆ ಅವಕಾಶ ನೀಡಲಾಗಿರುವ ಪರಿಣಾಮ ಸಹಕಾರ ಯೂನಿಯನ್ ಹಾಗೂ ಮಹಾಮಂಡಳಗಳ ಚುನಾವಣೆ ಪ್ರಕ್ರಿಯೆ ಶುರುವಾಗಿದೆ. ಈ ಸಂದರ್ಭದಲ್ಲೇ ಸಹಕಾರಿ ವಲಯದಲ್ಲಿ ‘ಬ್ಯಾಗ್ ಸಂಸ್ಥೆಗಳು’ ದೊಡ್ಡ ಸದ್ದುಮಾಡುತ್ತಿವೆ.!
ಚುನಾವಣೆ ಸಮಯದಲ್ಲಿ ಇಂಥ ಸಂಸ್ಥೆಗಳನ್ನು ಗುರುತಿಸುವುದೇ ಸಹಕಾರ ಇಲಾಖೆಗೆ ಸವಾಲಾಗಿದೆ. ನಾಲ್ಕೂವರೆ ವರ್ಷ ಏನೂ ಚಟುವಟಿಕೆ ಹೊಂದಿರದ ಸಂಘಗಳು ಈಗ ಮೈಕೊಡವಿ ನಿಂತು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಒಂದೇ ವಿಳಾಸದಲ್ಲಿ ಹಲವು ಸಂಸ್ಥೆಗಳು
ಒಂದೇ ವಿಳಾಸದಲ್ಲಿ ಹಲವು ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವಂತೆ ದಾಖಲೆ ಸಿದ್ಧಪಡಿಸಿ ಅದಕ್ಕೆ ಸಹಕಾರ ಇಲಾಖೆಯಿಂದ ಅನುಮೋದನೆ ಪಡೆಯಲಾಗುತ್ತದೆ. ಎಲ್ಲವೂ ಕಾನೂನುಬದ್ಧವಾಗಿಯೇ ನಡೆಯುತ್ತದೆ. ಆದರೆ ಕಾರ್ಯದರ್ಶಿ ಯಾರು? ಎಷ್ಟು ಸಿಬ್ಬಂದಿಯಿದ್ದಾರೆ? ವೇತನದ ಮೂಲ ಯಾವುದು ಎಂಬುದು ಮಾತ್ರ ಬ್ರಹ್ಮನಿಗೂ ತಿಳಿಯದ ಸ್ಥಿತಿ. ಸಹಕಾರಿ ತತ್ವವನ್ನು ಮೂಲೆಗುಂಪು ಮಾಡಿ ಸ್ವಹಿತಾಸಕ್ತಿಗಾಗಿ ಸಹಕಾರಿ ಸಂಸ್ಥೆಗಳನ್ನು ಹುಟ್ಟು ಹಾಕುವ ಪ್ರಕ್ರಿಯೆ ಹೆಚ್ಚುತ್ತಿದೆ. ಇದನ್ನು ತಡೆಗಟ್ಟುವುದು ಹೇಗೆ ಎಂಬ ಚಿಂತೆ ಸಹಕಾರ ಇಲಾಖೆ ಅಧಿಕಾರಿಗಳನ್ನು ಕಾಡುತ್ತಿದೆ.
ಏನಿದು ಬ್ಯಾಗ್ ಸಂಸ್ಥೆ
ಕೆಲವು ಸಹಕಾರ ಸಂಘಗಳು ಕಾನೂನುಬದ್ಧವಾಗಿ ಸಹಕಾರ ಇಲಾಖೆಯಲ್ಲಿ ನೋಂದಣಿಯಾಗಿರುತ್ತವೆ. ಒಬ್ಬರೇ ಅನೇಕ ಸಹಕಾರಿ ಸಂಸ್ಥೆಗಳನ್ನೂ ಹುಟ್ಟುಹಾಕಿರುತ್ತಾರೆ. ಅವರೇ ಸಂಘಕ್ಕೆ ಪದಾಧಿಕಾರಿಯೂ ಆಗಿರುತ್ತಾರೆ. ದಾಖಲೆಗಳೆಲ್ಲ ಬ್ಯಾಗ್ನಲ್ಲೇ ಸುರಕ್ಷಿತವಾಗಿರುತ್ತವೆ. ಹೀಗಾಗಿ ಇಂಥವನ್ನು ‘ಬ್ಯಾಗ್ ಸಂಸ್ಥೆಗಳು’ ಎಂದು ವ್ಯಂಗ್ಯವಾಗಿ ಕರೆಯಲಾಗುತ್ತದೆ. ಇಂತಹ ಸಂಸ್ಥೆಗಳನ್ನು ಹುಟ್ಟುಹಾಕುವ ಪ್ರಮುಖ ಉದ್ದೇಶ ಎಂದರೆ ದೊಡ್ಡ ಸಹಕಾರಿ ಸಂಸ್ಥೆಗಳಲ್ಲಿ ಹುದ್ದೆ ಪಡೆಯುವುದು. ಸಹಕಾರಿ ಯೂನಿಯನ್, ಡಿಸಿಸಿ ಬ್ಯಾಂಕ್, ರಾಜ್ಯ ಮಹಾಮಂಡಳಗಳಲ್ಲಿ ಪದಾಧಿಕಾರಿಯಾಗಲು ಬ್ಯಾಗ್ ಸಹಕಾರಿ ಸಂಸ್ಥೆಗಳನ್ನು ದೊಡ್ಡ ಮಟ್ಟದಲ್ಲಿ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕಾನೂನು ದುರುಪಯೋಗ
ಒಂದು ಕಡೆಯಲ್ಲಿ ಬ್ಯಾಗ್ ಸಂಸ್ಥೆಗಳ ಸಮಸ್ಯೆಯಾದರೆ ಕೆಲ ಸದಸ್ಯರು ಕಾನೂನು ದುರ್ಬಳಕೆ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ಅಂತಿಮ ಹಂತದಲ್ಲಿ ಸೇರ್ಪಡೆಯಾಗುವುದು ಚುನಾವಣೆ ನಡೆಸುವ ಸಹಕಾರ ಇಲಾಖೆ ಅಧಿಕಾರಿಗಳಿಗೆ ಹೊಸ ಸವಾಲಾಗಿದೆ. ಸತತ ಮೂರು ಸರ್ವಸದಸ್ಯರ ಸಭೆಗೆ ಗೈರಾಗುವ ಸಹಕಾರ ಸಂಸ್ಥೆಯ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂಬ ಕಾನೂನು ಜಾರಿಗೆ ಬಂದು ಹಲವು ವರ್ಷಗಳಾಗಿವೆ. ಆದರೆ ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿ ಕಡೇ ಕ್ಷಣದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಒಂದು ಸಹಕಾರ ಸಂಸ್ಥೆಯಲ್ಲಿ ಐದು ಸಾವಿರ ಸದಸ್ಯರಿದ್ದರೆ, ಮೂರು ಸಾವಿರ ಸದಸ್ಯರು ಮಾತ್ರ ಮತದಾನಕ್ಕೆ ಅರ್ಹರಾಗಿರುತ್ತಾರೆ. ಅಷ್ಟು ಮಂದಿಗೆ ಮತದಾನಕ್ಕೆ ಬೇಕಿರುವ ಸಿದ್ಧತೆ ಇಲಾಖೆಯಿಂದ ನಡೆದಿರುತ್ತದೆ. ಅಂತಿಮವಾಗಿ ಕೋರ್ಟ್ನಿಂದ ಆದೇಶ ತಂದು ನೂರಾರು ಮಂದಿ ಮತದಾರರ ಪಟ್ಟಿಗೆ ಸೇರ್ಪಡೆಯಾದರೆ ಕಡೇ ಕ್ಷಣದಲ್ಲಿ ಮತದಾನಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ.
12 ಸೊಸೈಟಿ ರದ್ದತಿ ಸಾಧ್ಯತೆ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 1,242 ಸಹಕಾರಿ ಸಂಸ್ಥೆಗಳಿವೆ. ಈ ಪೈಕಿ 84 ಸೊಸೈಟಿಗಳು ಮುಚ್ಚುವ ಹಂತದಲ್ಲಿವೆ. 12 ಸೊಸೈಟಿಗಳ ರದ್ದತಿಗೆ ಆದೇಶ ನಿರೀಕ್ಷಿಸಲಾಗುತ್ತಿದೆ. ವಿಶೇಷವೆಂದರೆ ಯಾವುದೋ ಸಹಕಾರಿ ಸಂಸ್ಥೆಯಲ್ಲಿ ಇನ್ನು ಯಾವುದೋ ಸಂಘದ ಕುರ್ಚಿ, ಟೇಬಲ್ಗಳೂ ಕಂಡು ಬಂದಿವೆ. ಯಾವುದೇ ಹಣಕಾಸು ವಹಿವಾಟು ನಡೆಸದ ಸಂಸ್ಥೆಗಳೂ ಇವೆ.
‘ಬ್ಯಾಗ್ ಸಂಸ್ಥೆಗಳ’ ಬಗ್ಗೆ ಬಹಿರಂಗ ಚರ್ಚೆಯಾಗಬೇಕು. ಸಹಕಾರ ಯೂನಿಯನ್ ಹಾಗೂ ಮಹಾಮಂಡಳಗಳ ಚುನಾವಣೆ ನಡೆಯಲಿಕ್ಕಿದೆ. ಎಲ್ಲಾ ಕಡೆ ಬ್ಯಾಗ್ ಸಂಸ್ಥೆಗಳ ಮತಗಳಿವೆ. ಇವುಗಳ ಅಸ್ತಿತ್ವದ ಬಗ್ಗೆ ಸಹಕಾರ ಇಲಾಖೆಯ ಉಪನಿಬಂಧಕರು ಹಾಗೂ ಲೋಕಾಯುಕ್ತ ತನಿಖೆ ನಡೆಸಬೇಕು. ಪಿ.ವೀರಮ್ಮ, ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷೆ, ಶಿವಮೊಗ್ಗ. ಸಹಕಾರಿ ಸಂಸ್ಥೆಗಳ ಲೆಕ್ಕಪರಿಶೋಧನೆಗೆ ಸೂಚನೆ ನೀಡಲಾಗಿದೆ. ಸಹಕಾರಿ ಯೂನಿಯನ್ ಮೂಲಕ ಸಹಕಾರ ಸಂಸ್ಥೆಗಳ ಪದಾಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಯಾವುದೇ ಸಹಕಾರಿ ಸಂಸ್ಥೆಗೆ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಷೇರುದಾರರು ಆಧಾರ. ಇವರೆಲ್ಲ ಪರಸ್ಪರ ಕೈಜೋಡಿಸಿದರೆ ಸಂಸ್ಥೆ ಬಲವರ್ಧನೆ ಸಾಧ್ಯ. ನಾಗೇಶ್ ಎಸ್.ಡೋಂಗ್ರೆ, ಸಹಕಾರ ಸಂಘಗಳ ಉಪನಿಬಂಧಕರು.