ವಿರಾಜಪೇಟೆ: ಕೊಡಗು ಕ್ರೀಡಾ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ ಎಲ್ಲ ಕ್ರೀಡೆಗಳಿಗೂ ಸಹಕಾರ ನೀಡುವಂತೆ ಬ್ಯಾಡ್ಮಿಂಟನ್ ಕ್ರೀಡೆಗೂ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಉದ್ಯಮಿ ಸಿ.ಎ.ನಾಸಿರ್ ಹೇಳಿದರು.
ನಗರದ ಚಿಕ್ಕಪೇಟೆಯಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಫ್ರೆಂಡ್ಸ್ ಯುವಕ ಸಂಘದಿಂದ ಆಯೋಜಿಸಿದ್ದ ಕೊಡಗು ಬ್ಯಾಡ್ಮಿಂಟನ್ ಲೀಗ್ 2ನೇ ಆವೃತ್ತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಭಾರತ ತನ್ನದೇ ಆದ ಕೊಡುಗೆ ನೀಡಿದೆ. ಕೊಡಗಿನ ಬ್ಯಾಡ್ಮಿಂಟನ್ ಕಲಿಗಳು ರಾಜ್ಯ, ದೇಶವನ್ನು ಪ್ರತಿನಿಧಿಸುವ ಮೂಲಕ ಕ್ರೀಡಾ ಫ್ರೌಡಿಮೆ ಮೆರೆದಿದ್ದಾರೆ. ಅದರಂತೆ ಫ್ರೆಂಡ್ಸ್ ಯುವಕ ಸಂಘ ಕ್ರೀಡೆಯನ್ನು ಉತ್ತಮ ವಾಗಿ ಆಯೋಜಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲೀಗ್ ಪಂದ್ಯಾಟಕ್ಕೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಜಾಸಿ ಮಾತನಾಡಿದರು.
ಎರಡನೇ ಆವೃತ್ತಿಯಲ್ಲಿ ಜಿಲ್ಲೆಯ ಪತ್ರಿಷ್ಠಿತ 6 ತಂಡಗಳು ಪಾಲ್ಗೊಂಡಿದ್ದವು. ಜಿಲ್ಲೆ, ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದ 110 ಬ್ಯಾಡ್ಮಿಂಟನ್ ಕ್ರೀಡಾಪಟುಗಳು ಪ್ರದರ್ಶನ ತೋರಿದರು. ಒಂದು ತಂಡಕ್ಕೆ ಒಟ್ಟು 5 ಪಂದ್ಯಗಳಂತೆ 60 ಪಂದ್ಯಗಳು ನಡೆದವು. ಅಂತಿಮ ಪಂದ್ಯಾಟ ಸಿದ್ದಾಪುರದ ಬಾರ್ ಬೇಡಿಯನ್ ಮತ್ತು ಕುಶಾಲನಗರದ ಜಂಪ್ ಸ್ಮಾೃಷರ್ಸ್ ತಂಡಗಳ ನಡುವೆ ನಡೆದು 2-1 ಅನುಪಾತದಲ್ಲಿ ಜಂಪ್ ಸ್ಯ್ಮಾಷರ್ಸ್ ತಂಡ ಬಾರ್ ಬೇಡಿಯನ್ ತಂಡವನ್ನು ಮಣಿಸಿತು.
ಬಾರ್ ಬೇಡಿಯನ್ ತಂಡ ದ್ವೀತಿಯ ಸ್ಥಾನಕ್ಕೆ ತೃಪ್ತಿಪಟ್ಟರೆ, ವಿರಾಜಪೇಟೆಯ ಶೀಹಾ ಸ್ಮಾೃಷರ್ಸ್ ಮೂರನೇ ಸ್ಥಾನ ಪಡೆಯಿತು. ರಾಜ್ಯಮಟ್ಟದ ತೀರ್ಪುಗಾರರು ಪಂದ್ಯಾಟದ ತೀರ್ಪುಗಾರರಾಗಿ ನಿರ್ವಹಿಸಿದರು. ಪ್ರಥಮ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು 50,000 ರೂ. ನಗದು ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ಮತ್ತು 30,000 ರೂ. ನಗದು, ತೃತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ನೀಡಿ ಗೌರವಿಸಲಾಯಿತು.
ಪಂದ್ಯಾಟದ ಟ್ರೋಫಿ ದಾನಿಗಳಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್, ಕಾಂಗ್ರೆಸ್ ಮುಖಂಡರಾದ ಹಾಬೀಬುಲ್ಲಾ, ನಗದು ಪ್ರಾಯೋಜಕ ಅನೂಪ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಅನೂಪ್ ಕುಮಾರ್, ಮೆಟ್ರೋ ಅಖಿಲ್, ಡಿಸಿಟಿ ಅಧ್ಯಕ್ಷ ರಿಯಾಜ್, ಪುರಸಭೆ ಸದಸ್ಯರಾದ ಎಚ್.ಎಸ್.ಮತೀನ್, ಮೊಹಮ್ಮದ್ ರಾಫಿ, ಅಬ್ದುಲ್ ಜಲೀಲ್ ಉಪಸ್ಥಿತರಿದ್ದರು. ಫ್ರೆಂಡ್ಸ್ ಸಂಘದ ಅಧ್ಯಕ್ಷ ರಾವೂಫ್, ಸಿ.ಎ.ರಾಸಿಕ್, ಇರ್ಷಾದ್ (ಇಚ್ಚು), ನಾವಾಫ್ ಸೇರಿದಂತೆ 6 ತಂಡಗಳ ಮಾಲೀಕರು, ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಹಾಜರಿದ್ದರು.