ಬೇಲೂರು: ಬ್ಯಾಡ್ಮಿಂಟನ್ ವೇಗದ ಗತಿಯ ಕ್ರೀಡೆಯಾಗಿರುವುದರಿಂದ ಕ್ರೀಡಾಪಟುಗಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಹೆಚ್ಚು ಸಹಕಾರಿಯಾಗಿದೆ ಎಂದು ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಚ್.ಎಂ.ಮಹೇಶ್ ಹೇಳಿದರು.
ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದಿಂದ ಶುಕ್ರವಾರ ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ವಿಷ್ಣು ಬ್ಯಾಡ್ಮಿಂಟನ್ ಅಕಾಡೆಮಿಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮಲೆನಾಡು ವಲಯ ಮಟ್ಟದ ಅಂತರ ಕಾಲೇಜುಗಳ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಷಟಲ್ ಬ್ಯಾಡ್ಮಿಂಟನ್ ಆಟಗಾರರಿಗೆ ವೇಗದ ಪ್ರತಿಕ್ರಿಯೆ ನೀಡುವಂತಹ ಕ್ರೀಡೆಯಾಗಿದೆ. ಇದರಿಂದ ಕ್ರೀಡಾಪಟುಗಳಿಗೆ ದಿನನಿತ್ಯದ ಆಲೋಚನೆಗಳು ಹಾಗೂ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜತೆಗೆ ದೈಹಿಕ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವುದರೊಂದಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆಯತ್ತ ಸಾಗಲು ಸಹಕಾರಿಯಾಗಿದೆ ಎಂದರು.
ಮುಂದಿನ ವರ್ಷದಿಂದ ನಮ್ಮ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯದಿಂದ ಹೊರಬರುತ್ತಿರುವ ಸಂಕಟ ಒಂದೆಡೆಯಾದರೆ, ನಮ್ಮದೇ ಆದ ಜಿಲ್ಲೆ ಹಾಸನ ವಿಶ್ವವಿದ್ಯಾನಿಲಯವಾಗಿ ಮಾರ್ಪಾಡು ಹೊಂದುತ್ತಿರುವುದು ಸಂತೋಷ ಸಂಗತಿಯಾಗಿದೆ. ಅಲ್ಲದೆ ಕ್ರೀಡೆಗಳಲ್ಲಿ ಸೋಲು, ಗೆಲುವು ಸಾಮಾನ್ಯ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಕ್ರೀಡಾ ಮನೋಭಾವ ಮೆರೆಯಬೇಕು ಎಂದರು.
ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಸಿ.ಎಸ್.ಪ್ರಕಾಶ್ ಮಾತನಾಡಿ, ಬೇಲೂರು ತಾಲೂಕಿನ ಸಾಕಷ್ಟು ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಕ್ರೀಡೆಗಿಂತ ಮೊಬೈಲ್‌ಗಳಲ್ಲಿ ಹೆಚ್ಚು ತೊಡಗುತ್ತಿರುವುದು ಬೇಸರದ ಸಂಗತಿ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮ ಸಾಧನೆ ಮಾಡುವುದಕ್ಕೆ ಮುಂದಾಗಬೇಕು ಎಂದರು.
ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರಾದ ಬಾಬು ಪ್ರಸಾದ್, ಪ್ರಕಾಶ್ ಕುಮಾರ್, ಲೋಕೇಶ್, ಯೋಗೇಶ್, ಶ್ರೀನಿವಾಸ್, ಮಲೆನಾಡು ವಲಯ ಸಂಚಾಲಕ ಮುರಳಿ, ವಿಷ್ಣು ಬ್ಯಾಡ್ಮಿಂಟನ್ ಅಕಾಡೆಮಿಯ ವಾದಿರಾಜ್ ಇದ್ದರು.