ಬದಿಯಡ್ಕ ಬಂಟರ ಸಂಘದ ಬಂಟೆರೆ ಆಟಿದ ಕೂಟವನ್ನು ಸುಬ್ಬಯ್ಯ ರೈ ಉದ್ಘಾಟಿಸಿದರು. ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ ರೈ ಪೆರಡಾಲ, ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲ ಗುತ್ತು, ಜಿಲ್ಲಾ ಉಪಾಧ್ಯಕ್ಷೆ ಶ್ಯಾಮಲ ಶೆಟ್ಟಿ ಕಾಸರಗೋಡು ಇದ್ದರು. 
ಜಿಲ್ಲೆ

ನಾಡಿನ ಅಭಿವೃದ್ಧಿಗೆ ಬಂಟರ ಅನನ್ಯ ಕೊಡುಗೆ : ಬದಿಯಡ್ಕ ಬಂಟೆರೆ ಆಟಿದ ಕೂಟದಲ್ಲಿ ಸುಬ್ಬಯ್ಯ ರೈ ಅನಿಸಿಕೆ

ಸೌಮ್ಯ ಆರ್

ಬದಿಯಡ್ಕ: ನಾಡಿನ ಅಭಿವೃದ್ಧಿಗೆ ಬಂಟ ಸಮಾಜದ ಕೊಡುಗೆ ಅನನ್ಯವಾಗಿದೆ. ಸಮಾಜದವರು ಒಗ್ಗಟ್ಟಾಗಿ ಸಂಘಟನೆ ಬಲಪಡಿಸಬೇಕು. ಮಹಿಳೆಯರೂ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮುಂಚೂಣಿಗೆ ಬರಬೇಕು ಎಂದು ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ವಕೀಲ ಸುಬ್ಬಯ್ಯ ರೈ ಅಭಿಪ್ರಾಯಪಟ್ಟರು.

ಬದಿಯಡ್ಕ ಬಂಟರ ಸಂಘದ ನೇತೃತ್ವದಲ್ಲಿ ಭಾನುವಾರ ಬದಿಯಡ್ಕದಲ್ಲಿ ಬಂಟೆರೆ ಆಟಿದ ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ ರೈ ಪೆರಡಾಲ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ದಯಾನಂದ ರೈ ಕಳುವಾಜೆ ಬಂಟ ಸಮಾಜದಲ್ಲಿ ಆಟಿ ತಿಂಗಳ ವಿಶೇಷತೆ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲ ಗುತ್ತು, ಜಿಲ್ಲಾ ಉಪಾಧ್ಯಕ್ಷೆ ಶ್ಯಾಮಲ ಶೆಟ್ಟಿ ಕಾಸರಗೋಡು, ಕುಂಬಳೆ ಫಿರ್ಕಾ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ, ಪ್ರಧಾನ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕಾನ, ಬ್ಲಾಕ್ ಪಂಚಾಯಿತಿ ಮಾಜಿ ಸದಸ್ಯ ರಮಾನಾಥ ರೈ ಮೇಗಿನಕಡಾರು, ಕುಂಬಳೆ ಫಿರ್ಕಾ ಬಂಟರ ಸಂಘದ ಜಂಟಿ ಕಾರ್ಯದರ್ಶಿಗಳಾದ ಗಿರೀಶ್ ರೈ ವಳಮಲೆ, ರವೀಂದ್ರನಾಥ ಶೆಟ್ಟಿ ವಳಮಲೆ, ಬದಿಯಡ್ಕ ಬಂಟರ ಸಂಘದ ಉಪಾಧ್ಯಕ್ಷ ಜಗನ್ನಾಥ ರೈ ಕೊರೆಕ್ಕಾನ, ಗುತ್ತಿಗೆದಾರ ನವೀನ್ ಶೆಟ್ಟಿ ಬೇಳ ಉಪಸ್ಥಿತರಿದ್ದರು.

ಶ್ರದ್ಧಾ ರೈ, ಕೃತಿ ರೈ ಪ್ರಾರ್ಥನೆ ಹಾಡಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿ, ಕೋಶಾಧಿಕಾರಿ ದಯಾನಂದ ರೈ ಕಡಾರು ವಂದಿಸಿದರು. ಶಿಕ್ಷಕಿ ಅಶ್ವಿನಿ ಪ್ರದೀಪ್ ಶೆಟ್ಟಿ ಬೇಳ ನಿರೂಪಿಸಿದರು.

ಬಹುಮಾನ, ಸನ್ಮಾನ

ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು. ಭಜನೆ, ರಸಪ್ರಶ್ನೆ ಮೊದಲಾದ ಸ್ಪರ್ಧೆಗಳಲ್ಲಿ ಪಾಲ್ಗೊಂಡವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಅವಿನಾಶ್ ರೈ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲೂ ಎ ಪ್ಲಸ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಹೈದರಾಬಾದಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜೂನಿಯರ್ ವಿಭಾಗದ ಕಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಿದ ಮೈತ್ರಿ ರೈ ಅವರನ್ನು ಸನ್ಮಾನಿಸಲಾಯಿತು.