ಹುಬ್ಬಳ್ಳಿ : ವಿದ್ಯಾರ್ಥಿ ಜೀವನದಲ್ಲಿ ಸತತ ಪ್ರಯತ್ನದ ಮೂಲಕ ಉನ್ನತ ಗುರಿ ಸಾಧಿಸಲು ಸಾಧ್ಯವಿದೆ ಎಂದು ನಿವೃತ್ತ ಪೊಲೀಸ್ ಉಪ ಆಯುಕ್ತ ಎ.ಆರ್. ಬಡಿಗೇರ ಹೇಳಿದರು.
ಬೆಂಗಳೂರಿನ ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಶನ್-ವಿವಿಜಿಎಫ್ ಮತ್ತು ಧಾರವಾಡದ ಜಿಲ್ಲಾ ವಿಶ್ವಕರ್ಮ ಎಜ್ಯುಕೇಶನಲ್ ಟ್ರಸ್ಟ್ನ ಸಹಯೋಗದಲ್ಲಿ ಧಾರವಾಡದ ಜಿಲ್ಲಾ ಸಾಹಿತ್ಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಜಿಎಫ್ನ ಧಾರವಾಡ ವಲಯ ಕಚೇರಿ’ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳು ಕೀಳರಿಮೆ ತೊರೆದು ಮನೋಸ್ಥೈರ್ಯದೊಂದಿಗೆ ಗುರುವಿನ ಮಾರ್ಗದರ್ಶನದಲ್ಲಿ ಏಕಾಗ್ರತೆಯಿಂದ ಓದಿದರೆ ಹಿರಿದಾದ ಸಾಧನೆ ಮಾಡಲು ಸಾಧ್ಯವಿದೆ. ಮೊದಲ ಯತ್ನದಲ್ಲಿ ವಿಫಲರಾದರೆ ವಿಚಲಿತರಾಗದೆ, ಮರಳಿ ಯತ್ನ ಮಾಡಿ ಗೆಲ್ಲಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಕರಾದ ಡಾ. ಕೆ.ಪಿ. ಈರಣ್ಣ ಮಾತನಾಡಿ, ಮಕ್ಕಳಿಗೆ ಓದಿನ ಜತೆಗೆ ಒಳ್ಳೆಯ ಸಂಸ್ಕಾರ ನೀಡುವುದು ಪಾಲಕರ ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂದರು.
ಅತಿಥಿಗಳಾಗಿದ್ದ ಶಿರಸಂಗಿಯ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೊ. ಪಿ.ಬಿ. ಬಡಿಗೇರ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಬೀಳಗಿ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ವಿಶ್ವನಾಥ ಪತ್ತಾರ, ಧಾರವಾಡ ಕೃಷಿ ಬಿ.ವಿ.ವಿ.ಯ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಮೌನೇಶ್ವರಿ ಕಮ್ಮಾರ ಮಾತನಾಡಿದರು.
ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ವಿಶ್ವಕರ್ಮ ಮತ್ತು ವಿವಿಧ ಜನಾಂಗಗಳ 78 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಂಶಾ ಪತ್ರ ನೀಡಿ, ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ವಿವಿಜಿಎಫ್ ಸಂಸ್ಥೆಯ ನಿರ್ದೇಶಕ ರಾಜೇಶ ಆದಿನಾರಾಯಣ ಮಾತನಾಡಿದರು.
ಸಮಾಜ ಸೇವಕಿ ರಾಮದುರ್ಗದ ಕಲಾವತಿ ಪತ್ತಾರ, ಬೆಂಗಳೂರಿನ ಗೋಪಾಲಕೃಷ್ಣ ಮನುವಾಚಾರ್ಯ, ಧಾರವಾಡದ ಡಾ. ಜಿ.ಕೆ. ಬಡಿಗೇರ, ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಹೊನ್ನಾವರದ ಸುಬ್ರಮಣ್ಯ ಆಚಾರ ಹಾಗೂ ಜಿಲ್ಲಾ ವಿಶ್ವಕರ್ಮ ಎಜುಕೇಶನಲ್ ಟ್ರಸ್ಟ್ನ ನಿಕಟ ಪೂರ್ವ ಅಧ್ಯಕ್ಷ ಶಿವಣ್ಣ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.
ಫೌಂಡೇಶನ್ನ ಆರ್ಥಿಕ ವಿಭಾಗದ ಮುಖ್ಯಸ್ಥ ನಾಗರಾಜ ಆಚಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಜಿಎಫ್ನ ಸದಸ್ಯರಾದ ಸಿ.ನಾಗರಾಚಾರ್, ಸುರೇಶ ಪತ್ತಾರ, ವಿನಾಯಕ ಆಚಾರ, ಸಾವನ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಡಾ. ವಿರೂಪಾಕ್ಷ ಬಡಿಗೇರ ಸ್ವಾಗತಿಸಿದರು. ಡಾ. ಜಿ. ಬಡಿಗೇರ ನಿರೂಪಿಸಿದರು. ಸುರೇಶ ಪತ್ತಾರ ವಂದಿಸಿದರು.