ಹುಬ್ಬಳ್ಳಿ: ಕಲೆಯನ್ನೇ ಜೀವನವಾಗಿಸಿಕೊಂಡು ಬದುಕಿದ್ದ ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ರಂಗಕಲಾವಿದ, ರಥಶಿಲ್ಪಿ ದಿ. ಮೈಲಾರಪ್ಪ ಗಿರಿಯಪ್ಪ ಬಡಿಗೇರ ಇವರ 25ನೇ ಪುಣ್ಯಸ್ಮರಣೆ ಜೂನ್ 15ರಂದು ಮಧ್ಯಾಹ್ನ 12ಕ್ಕೆ ವಿದ್ಯಾನಗರದ ಅವರ ಪುತ್ರ, ಶಿಕ್ಷಕ ಕವಿ ಗುರುಸಿದ್ದಪ್ಪ ಬಡಿಗೇರ ಅವರ ನಿವಾಸದಲ್ಲಿ ಏರ್ಪಡಿಸಲಾಗಿದೆ.
ಹಿರೇಹೊನ್ನಿಹಳ್ಳಿಯ ಶ್ರೀ ಗಜಾನನ ನಾಟ್ಯಕಲಾ ಸಾಂಸತಿಕ ಸಂಘ ಹಾಗೂ ಹುಬ್ಬಳ್ಳಿಯ ಚೆಲುವ ಕನ್ನಡನಾಡು ಸಾಂಸತಿಕ ಸಂಸ್ಥೆಯ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ದಿ. ಮೈಲಾರಪ್ಪ ಅವರು ಮನೆತನದ ಹಿರಿಯ ದಿ. ಕಾಳಪ್ಪ ಬಡಿಗೇರ ಮತ್ತು ಗಿರಿಯಪ್ಪ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಬಾಲಕನಿದ್ದಾಗಲೇ ಉತ್ತರಕನ್ನಡ ಜಿಲ್ಲೆಯ ಪವಿತ್ರ ಪುಣ್ಯ ಕ್ಷೇತ್ರ ಉಳವಿ ಚೆನ್ನಬಸವೇಶ್ವರ ರಥದ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡರು.
ತಾವೇ ಸ್ವತಃ ಕಲಘಟಗಿ ತಾಲೂಕಿನ ಉಗ್ನಿಕೆರಿ ಬಸವೇಶ್ವರ ರಥ, ಗಳಗಿ ಹುಲಕೊಪ್ಪದ ಹೊಂಡದ ಬಸವೇಶ್ವರ ರಥ, ತರ್ಲಘಟ್ಟ ನೆಲಗುಡ್ಡದ ಕುಂಟಯ್ಯಸ್ವಾಮಿ ರಥ, ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯ ವೆಂಕಟೇಶ್ವರ ರಥಗಳಲ್ಲದೇ ಅನೇಕ ದೇವಸ್ಥಾನಗಳ ರಥಗಳು ಮತ್ತು ದೇವರ ಉತ್ಸವಗಳ ಪಲ್ಲಕ್ಕಿಗಳನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾದರು.
ಕಾಷ್ಟ ಕಲೆಯಲ್ಲಿ ನಿಷ್ಣಾತರಾದ ಇವರು ರಥಗಳ ತಯಾರಿಕೆಯಲ್ಲಿ ತಮ್ಮ ಕಲಾ ನೈಪುಣ್ಯತೆಯನ್ನಷ್ಟೇ ಅಲ್ಲದೇ ದೈವಿಕತೆಯನ್ನು ಧಾರೆ ಎರೆದಿದ್ದ ಇವರಿಗೆ ರಥಶಿಲ್ಪಿ ಎಂದೇ ಕರೆಯುತ್ತಿದ್ದರು.
ಕರ್ನಾಟಕ ವಿದ್ಯಾವರ್ಧಕ ಸಂಘ, ಗ್ರಾಮ ಪಂಚಾಯತ ಹಿರೇಹೊನ್ನಿಹಳ್ಳಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಗಜಾನನ ನಾಟ್ಯಕಲಾ ಸಾಂಸತಿಕ ಸಂಘ ಹಿರೇಹೊನ್ನಿಹಳ್ಳಿ ಹಾಗೂ ಅನೇಕ ವೀರಶೈವ ಲಿಂಗಾಯತ ಮಠ ಮಂದಿರಗಳಿಂದ ಮತ್ತು ಸಂಘ ಸಂಸ್ಥೆಗಳಿಂದ ಅತ್ಯುತ್ತಮ ಕರಕುಶಲ ಕರ್ಮಿ ಎಂದು ಪ್ರಶಸ್ತಿ ಪುರಸ್ಕಾರಗಳನ್ನು ದಿ. ಮೈಲಾರಪ್ಪ ಬಡಿಗೇರ ಅವರು ಪಡೆದಿದ್ದರು.