ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಡವರಿಗೆ ಸೂರು ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸುತ್ತಿದ್ದು, ಅದರಂತೆ ವಿಜಯಪುರ ಪುರಸಭೆ ವ್ಯಾಪ್ತಿಯ 75 ಫಲಾನುಭವಿಗಳಿಗೆ ಮನೆ ನಿರ್ಮಿಸಲು ಕಾರ್ಯಾದೇಶ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವಿಜಯಪುರದಲ್ಲಿ ಪೌರಾಡಳಿತ ಇಲಾಖೆ ಹಾಗೂ ಜಿಲ್ಲಾಡಳಿತ, ಜಿಪಂನಿಂದ ನಿರ್ಮಿಸಿರುವ ಪುರಸಭೆಯ ವಾಣಿಜ್ಯ ಮಳಿಗೆಗಳು, ವಾಹನಗಳ ಶೆಡ್, ಪೌರ ಕಾರ್ಮಿಕರ ವಿಶ್ರಾಂತಿ ಕೊಠಡಿ ಮತ್ತು ಹಣ್ಣು ತರಕಾರಿ ಮಳಿಗೆಗಳನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ವಾಣಿಜ್ಯ ಮಳಿಗೆಗಳಿಂದ ನಾಗರಿಕರಿಗೆ ಹಾಗೂ ವರ್ತಕರಿಗೆ ಅನುಕೂಲವಾಗುವ ಜತೆಗೆ ಪಟ್ಟಣದ ಅಭಿವೃದ್ಧಿಗೂ ಸಹಕಾರಿಯಾಗಲಿವೆ ಎಂದರು.
ವಿಜಯಪುರ ಹಾಗೂ ದೇವನಹಳ್ಳಿ ವೇಗವಾಗಿ ಬೆಳೆಯುತ್ತಿರುವ ನಗರಗಳಾಗಿರುವುದರಿಂದ ಮುಂದಿನ 50 ವರ್ಷಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಯ ನೀಲನಕ್ಷೆ ತಯಾರಿಸಬೇಕೆಂದು ನಗರಸಭೆ ಸದಸ್ಯರಿಗೆ ತಿಳಿಸಿದರು. ಸರ್ಕಾರ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಇವೆರಡು ಪುರಸಭೆಗೆ ನಗರೋತ್ಥಾನ 4 ಹಂತದ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧವಾಗಿದೆ. ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು, ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಪೌರಕಾರ್ಮಿಕರಿಗೆ ಮನೆ: ನಗರದ ನೈರ್ಮಲ್ಯ ರಕ್ಷಣೆಯಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯ. ಅವರ ಸೇವೆ ಪರಿಗಣಿಸಿ ರಾಜ್ಯ ಸರ್ಕಾರ ಕಾಯಂ ಪೌರ ಕಾರ್ಮಿಕರಿಗೆ ವಸತಿ ನಿರ್ಮಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿ.ಆರ್.ಅಂಬೇಡ್ಕರ್ ಆವಾಸ್ ಯೋಜನೆ, ವಾಜಪೇಯಿ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದಲ್ಲಿ 1.23 ಕೋಟಿಗೂ ಹೆಚ್ಚು ವಸತಿ ನಿರ್ಮಿಸುವ ಸಂಬಂಧ ಸಿದ್ಧತೆ ನಡೆಸಿದ್ದು, ಇದರಲ್ಲಿ 1.20 ಕೋಟಿಯಷ್ಟು ಮನೆಗಳು ನಿರ್ಮಾಣ ಹಂತದಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದರು.
ಅಂಗವಿಕಲರಿಗೆ ಸೌಲಭ್ಯ ವಿತರಣೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ದೇವನಹಳ್ಳಿ ತಾಲೂಕು ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ವಿಕಲಾಂಗರಿಗೆ ಯಂತ್ರಚಾಲಿತ ದ್ವಿಚಕ್ರ ಮೋಟಾರು ವಾಹನಗಳ ವಿತರಣೆ ಹಾಗೂ ಬೆನ್ನುಹುರಿ ಅಪಘಾತಕ್ಕೊಳಗಾದ ಅಂಗವಿಕಲರಿಗೆ ಪುನರ್ವಸತಿ ಸಂಚಾರ ವಾಹನಕ್ಕೆ ಸಚಿವರು ಚಾಲನೆ ನೀಡಿದರು.
100 ಕೋಟಿ ರೂ.ಅನುದಾನಕ್ಕೆ ಮನವಿ: ಸಾಕಷ್ಟು ಇತಿಹಾಸ ಹೊಂದಿರುವ ವಿಜಯಪುರ ಪುರಸಭೆ, ರಾಜ್ಯದ ಶತಮಾನ ಕಂಡ ಪುರಸಭೆಗಳಲ್ಲಿ ಒಂದಾಗಿದೆ, ಇದರ ಅಭಿವೃದ್ಧಿ ಹಾಗೂ ಶತಮಾನದ ನೆನಪಿಗಾಗಿ 100 ಕೋಟಿ ರೂ.ಅನುದಾನ ನೀಡುವ ಮೂಲಕ ರಾಜ್ಯ ಸರ್ಕಾರ ಪಟ್ಟಣದ ಅಭಿವೃದ್ಧಿಗೆ ನೆರವಾಗಬೇಕು ಎಂದು ಪುರಸಭಾಧ್ಯಕ್ಷೆ ರಾಜೇಶ್ವರಿ ಭಾಸ್ಕರ್ ಮನವಿ ಮಾಡಿದರು.