ಚನ್ನಮ್ಮನ ಕಿತ್ತೂರು: ಹಲವು ವರ್ಷಗಳಿಂದ ವಿವಿಧ ಸೌಲಭ್ಯಗಳಿಲ್ಲದೆ ಬಡವಾಗಿದ್ದ ಪಟ್ಟಣದ ಸರ್ಕಾರಿ ಆಸ್ಪತ್ರೆ ಈಗ ಬಡವರ ಸಂಜೀವಿನಿಯಾಗಿದ್ದು, ವಿವಿಧ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿ ಗಮನ ಸೆಳೆಯುತ್ತಿದೆ.
ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಪಟ್ಟಣದ ಸರ್ಕಾರಿ ಆರೋಗ್ಯ ಕೇಂದ್ರವನ್ನು ಮತ್ತಷ್ಟು ಹೈಟೆಕ್ ಮಾಡಲಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ದೊರಕುವ ಆಧುನಿಕ ತಂತ್ರಜ್ಞಾನಯುಕ್ತ ಚಿಕಿತ್ಸೆ ಚನ್ನಮ್ಮನ ಕಿತ್ತೂರಿನ ಸರ್ಕಾರಿ ಆರೋಗ್ಯ ಕೇಂದ್ರದಲ್ಲೂ ಸಿಗುವಂತಾಗಿದೆ.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ, ಆನ್‌ಲೈನ್ ಹೊರರೋಗಿಗಳ ದಾಖಲಾತಿ, ಚಿಕ್ಕ ಮಕ್ಕಳು ಮತ್ತು ನವಜಾತ ಶಿಶುಗಳ ಆರೈಕೆಗೆ ಪ್ರತ್ಯೇಕ ತುರ್ತುನಿಗಾ ಘಟಕ (ಐಸಿಯು), ಆಧುನಿಕ ಸ್ಕಾೃನಿಂಗ್ ಯಂತ್ರ, ಹೆರಿಗೆ ಹಾಗೂ ಶಸ್ತ್ರಚಿಕಿತ್ಸಾ ಸೌಲಭ್ಯ, ಉದರ ದರ್ಶಕ ಚಿಕಿತ್ಸೆ, ರಕ್ತ ತಪಾಸಣೆ, ಎಕ್ಸರೇ ಸೇರಿದಂತೆ ವಿವಿಧ ಸೌಲಭ್ಯಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. ಸಾಮಾನ್ಯ ವಾರ್ಡ್‌ನಲ್ಲೂ ಉತ್ತಮ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ಬಾಣಂತಿಯರ ಸ್ನಾನಕ್ಕೆ ಬಿಸಿನೀರು ಹೀಗೆ ಅನೇಕ ಸವಲತ್ತು ನೀಡುವ ಮೂಲಕ ಕಿತ್ತೂರು ಆಸ್ಪತ್ರೆ ಮೆಚ್ಚುಗೆ ಪಡೆಯುತ್ತಿದೆ.
ಬದಲಾದ ಆಸ್ಪತ್ರೆ ಚಿತ್ರಣ: ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗುಮುರಿಯುವವರ ಸಂಖ್ಯೆ ಹೆಚ್ಚಿರುವಾಗ ಆಸ್ಪತ್ರೆ ಅಭಿವೃದ್ಧಿಗಾಗಿಯೇ ಶಾಸಕ ಬಾಬಾಸಾಹೇಬ ಪಾಟೀಲ ಸರ್ಕಾರದಿಂದ ಅನುದಾನ ತಂದಿರುವುದು ಆಸ್ಪತ್ರೆ ಚಿತ್ರಣ ಬದಲಾಯಿಸಿದೆ. ಆಸ್ಪತ್ರೆಯಲ್ಲಿ ಉತ್ತಮ ವಾತಾವರಣ ನಿರ್ಮಾಣಗೊಂಡಿರುವುದು ವೈದ್ಯಾಧಿಕಾರಿಗಳೂ ಸೇರಿದಂತೆ ಸಿಬ್ಬಂದಿ ವರ್ಗವನ್ನು ಪ್ರೋತ್ಸಾಹಿಸುತ್ತಿದ್ದು, ಆಸ್ಪತ್ರೆಗೆ ಭೇಟಿ ನೀಡುತ್ತಿರುವ ರೋಗಿಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆ ಬಗ್ಗೆ ಸ್ಥಳೀಯರು ಹೊಂದಿದ್ದ ಅಸಮಾಧಾನವೂ ಬದಲಾಗಿ ಜನಸ್ನೇಹಿ ವಾತಾವರಣ ಕಂಡು ಬರುತ್ತಿದೆ.
ಜನಸಾಮಾನ್ಯರ ಅನುಕೂಲಕ್ಕಾಗಿ ಚನ್ನಮ್ಮನ ಕಿತ್ತೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ವಿವಿಧ ಸೌಲಭ್ಯ ಕಲ್ಪಿಸಲಾಗಿದ್ದು, ಅತ್ಯಾಧುನಿಕ ಯಂತ್ರಗಳ ಸೇವೆಯೂ ಲಭ್ಯವಿದೆ. ಶೀಘ್ರದಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣದ ಕೆಲಸವೂ ಆರಂಭವಾಗಲಿದೆ.| ಬಾಬಾಸಾಹೇಬ ಪಾಟೀಲ ಶಾಸಕ ಚನ್ನಮ್ಮನ ಕಿತ್ತೂರು
ಚನ್ನಮ್ಮನ ಕಿತ್ತೂರಿನ ಸರ್ಕಾರಿ ಆಸ್ಪತ್ರೆ ಈಗ ಮೊದಲಿನಂತಿಲ್ಲ. ಖಾಸಗಿ ಆಸ್ಪತ್ರೆಗಳನ್ನು ಮೀರಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಲಭ್ಯ ಇವೆ. ಸಾರ್ವಜನಿಕರು ಆಸ್ಪತ್ರೆಯ ಸದುಪಯೋಗ ಪಡೆದುಕೊಳ್ಳಬೇಕು.| ಡಾ.ಇಮಾಮ್ ರಾಜಗೂಳಿ ಮುಖ್ಯ ವೈದ್ಯಾಧಿಕಾರಿ, ಚನ್ನಮ್ಮನ ಕಿತ್ತೂರು
| ನಾಗರಾಜ ಜೋರಾಪುರ ಚನ್ನಮ್ಮನ ಕಿತ್ತೂರು