ಜಿಲ್ಲೆ

ಭಗವಂತನ ಸ್ಮರಣೆಯಿಂದ ನೆಮ್ಮದಿ

ಬಾದಾಮಿ: ಭಗವಂತನ ಸ್ಮರಣೆಯಿಂದ ಬದುಕಿನ ಬವಣೆ ದೂರವಾಗಿ ಮನುಷ್ಯ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯವಿದೆ ಎಂದು
ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಹೇಳಿದರು.

ಐತಿಹಾಸಿಕ ಬಾದಾಮಿ ಸಮೀಪದ ಸುಕ್ಷೇತ್ರ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಮತ್ತು ಪಕ್ಕದಲ್ಲಿರುವ ಗೋ ಶಾಲೆ ಹಾಗೂ ನಗರದ ಶ್ರೀ ದತ್ತಾತ್ರೇಯ, ಶ್ರೀ ವೆಂಕಟೇಶ್ವರ, ಶ್ರೀರಾಘವೇಂದ್ರ ಸ್ವಾಮಿಗಳ ಮಠ, ಶ್ರೀರಾಮ ಮಂದಿರಕ್ಕೆ ಬುಧವಾರ ಭೇಟಿ ನೀಡಿ ಭಕ್ತರಿಗೆ ಆಶಿರ್ವಚನ ನೀಡಿದರು.

ಪರಮಾತ್ಮನನ್ನು ಧ್ಯಾನಿಸುವ ರೀತಿ ಬೇರೆ ಇರಬಹುದು ಆದರೆ ಪರಮಾತ್ಮ ಮಾತ್ರ ಒಬ್ಬನಿದ್ದಾನೆ. ನಾವು ಇಂದಿನ ಯುಗದಲ್ಲಿ ನೆಮ್ಮದಿಗಾಗಿ ಹರಸಾಹಸ ಪಡುತ್ತೇವೆ. ನೆಮ್ಮದಿ ಎಂಬುದು ಪರಮಾತ್ಮನ ಧ್ಯಾನದಲ್ಲಿ ಮತ್ತು ಪರೋಪಕಾರದಲ್ಲಿ ಅಡಕವಾಗಿದೆ. ಇದನ್ನು ಅರಿತುಕೊಂಡು ಜನರು ಧ್ಯಾನಾಸಕ್ತರು ಆಗಬೇಕೆಂದು ಸಲಹೆ ನೀಡಿದರು.

ಭಗವಂತನ ಅನುಗ್ರಹ ನಮ್ಮ ಮೇಲಿದೆ ಹೀಗಾಗಿ ನಾವೇ ಭಾಗ್ಯವಂತರು. ಭಗವದ್ಗೀತೆಯ ಸಾರವನ್ನು ಬದುಕಿನೂದ್ದಕ್ಕೂ ಅಳವಡಿಸಿಕೊಂಡು ಬದುಕಿದರೆ ಸಾಕು. ಬದುಕಿನ ಎಲ್ಲ ರೀತಿಯ ದುಗುಡ, ದುಮ್ಮಾನಗಳು ದೂರವಾಗಿ ಸಂತಸದ ಜೀವನ ನಡೆಸಬಹುದು ಇದಕ್ಕಾಗಿ ನಾವು ನಿತ್ಯ ಭಗವಂತನ ಸ್ಮರಣೆ ಮಾಡುವುದು ಅವಶ್ಯವಾಗಿದೆ ಎಂದರು.

ಶ್ರೀಗಳೊಂದಿಗೆ ರಘೋತ್ತಮಾಚಾರ್ಯ ನಾಗಸಂಪಗಿ, ರಾಜಾಚಾರ್ಯ ತಾಳಿಕೋಟಿ, ಬಾಗಲಕೋಟೆ ಅಖಿಲ ಭಾರತ ಮಧ್ವ ಮಹಾಮಂಡಲದ ಸಂಚಾಲಕ ಸಂತೋಷ ಗದ್ದನಕೇರಿ, ವ್ಯಾಸರಾಯರ ಮಠದ ಆಸ್ಥಾನದ ವಿದ್ವಾನ ಬ್ರಹ್ಮಣ್ಯಾಚಾರ್ಯರು, ಗೋಶಾಲೆಯ ಸಂಚಾಲಕರಾದ ದೇಶಪಾಂಡೆ ಪಂಡಿತದ್ವಯರು ಇತರರಿದ್ದರು.

ಬನಶಂಕರಿಯಲ್ಲಿ ದೇವಸ್ಥಾನ ಕಮಿಟಿ ಚೇರ್ಮನ್ ಎಂ.ಎಸ್.ಪೂಜಾರ, ಮಹೇಶ, ಅಪ್ಪಣ್ಣ, ವಾಸುದೇವ, ಮಾಲತೇಶ, ಹರ್ಷ, ನಗರದಲ್ಲಿ ಡಾ.ವಿ.ವೈ.ಭಾಗವತ, ವಿಜಯೀಂದ್ರ ಇನಾಮದಾರ, ಅನಂತ ಗುಡಿ, ಕೆ.ವಿ.ಕೆರೂರ, ಪ್ರಲ್ಹಾದ ಇನಾಮದಾರ, ಆರ್.ಕೆ. ದೇಶಪಾಂಡೆ, ಪಿ.ಪಿ. ಕಾರಕೂನ, ವಿ.ಎಸ್. ಗುಡಿ, ಪ್ರಸನ್ನ ಮುಗಳಿ, ಕಿಶೋರ ಪಾಟೀಲ, ನಂದಕುಮಾರ ಕಟ್ಟಿ ಇತರರು ಪಾಲ್ಗೊಂಡಿದ್ದರು.

ಪಾದಪೂಜೆ : ನಗರಕ್ಕೆ ಭೇಟಿ ನೀಡಿದ್ದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರಿಗೆ ಪಾದಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಗಳು ಭಕ್ತ ವೃಂದಕ್ಕೆ ಆಶಿರ್ವಚನ ನೀಡುವುದರ ಜತೆಗೆ ಲ ಮಂತ್ರಾಕ್ಷತೆ ನೀಡಿ ಶ್ರೀಕೃಷ್ಣನ ಅನುಗ್ರಹ ನಿಮ್ಮ ಮೇಲಿರಲಿ ಎಂದು ನುಡಿದರು.