ಡಯಾಸಿಲಿಸ್ ಕೊಠಡಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಯುಪಿಎಸ್ ಕನೆಕ್ಷನ್ ಇಲ್ಲದೆ ರೋಗಿ ನರಳಾಡುತ್ತಿರುವುದು. 
ಜಿಲ್ಲೆ

ಬಾದಾಮಿ ತಾಲೂಕಾಸ್ಪತ್ರೆಗಿಲ್ಲ ಸೌಲಭ್ಯ ಭಾಗ್ಯ

ದತ್ತಾತ್ರೇಯ ಪಿ ಕುಲಕರ್ಣಿ

ಬಾದಾಮಿ: ತಾಲೂಕು ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಪರೀಕ್ಷೆ ಮಾಡಲು ಅಗತ್ಯ ಯಂತ್ರೋಪಕರಣಗಳು ಇಲ್ಲದೆ ಖಾಸಗಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬರಲು ಶಿಫಾರಸ್ಸು ಮಾಡುತ್ತಿದ್ದು, ಇದರಿಂದ ರೋಗಿಗಳು ಬಾದಾಮಿಯಿಂದ ಬಾಗಲಕೋಟೆಗೆ, ಬಾಗಲಕೋಟೆಯಿಂದ ಬಾದಾಮಿ ಅಲೆದಾಡುವಂತಾಗಿದೆ.

ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ಕೊಡುತ್ತಿದೆ ಎಂದು ಹೇಳುವ ಸರ್ಕಾರ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಪರೀಕ್ಷೆ ಮಾಡಲು ನೇತ್ರ ತಪಾಸಣೆ, ಕಿವಿ, ಮೂಗು, ಗಂಟಲು ಪರೀಕ್ಷೆಗೆ ಬೇಕಾದ ಬೆರಾ, ಆಡಿಯೋ ಮೀಟರ್ ಇಲ್ಲದೆ ಜಿಲ್ಲಾಸ್ಪತ್ರೆಗೆ ಅಥವಾ ಬಾಗಲಕೋಟೆಯ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜು (ಕುಮಾರೇಶ್ವರ ಆಸ್ಪತ್ರೆ)ಗೆ ಶಿಾರಸ್ಸು ಮಾಡಲಾಗುತ್ತಿದೆ. ಸಿಟಿ ಸ್ಕಾೃನಿಂಗ್ ಮಷಿನ್ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ವೈದ್ಯರೂ ಇಲ್ಲ.

ಯುಡಿಐಡಿ ಕಾರ್ಡ್ ಮಾಡಿಸಲು ಪರದಾಟ

ತಾಲೂಕಿನ ವಿವಿಧ ಗ್ರಾಮ, ನಗರಗಳಿಂದ 21 ವಿಧದ ವಿಕಲಚೇತನರು ವಿಕಲಚೇತನರ ಗುರುತಿನ ಚೀಟಿ (ಯುಡಿಐಡಿ) ಮಾಡಿಸಲು ತಾಲೂಕಾಸ್ಪತ್ರೆಗೆ ಬಂದಾಗ ನೇತ್ರ, ಇಎನ್‌ಟಿ ವೈದ್ಯರು ಹೆಚ್ಚಿನ ಪರೀಕ್ಷೆ ಮಾಡಿಸಿಕೊಂಡು ಬರಲು ಜಿಲ್ಲಾಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗೆ ಶಿಾರಸ್ಸು ಮಾಡಿ ಕಳುಹಿಸುತ್ತಾರೆ. ಇದರಿಂದ ತಾಲೂಕಿನಿಂದ ಜಿಲ್ಲೆಗೆ, ಜಿಲ್ಲೆಯಿಂದ ತಾಲೂಕಿಗೆ ಅಲೆದಾಡುವ ಸ್ಥಿತಿ ಇದೆ.

ನೇತ್ರ ತಪಾಸಣೆ ಮಾಡುವ ಯಂತ್ರೋಪಕರಣಗಳು ಇಲ್ಲ. ಆಡಿಯೋ ಮೀಟರ್, ಬೆರಾ ಪರೀಕ್ಷೆ ಮಾಡಲು ಸಲಕರಣೆಗಳು ಇಲ್ಲ. ಇದರಿಂದ ವಿಕಲಚೇತನರು ಯುಡಿಐಡಿ ಕಾರ್ಡ್ ಮಾಡಲು ಅಲೆದಾಡಬೇಕಾಗಿದೆ. ಅಗತ್ಯ ನೇತ್ರ, ಇಎನ್‌ಟಿ ಯಂತ್ರೋಪಕರಣಗಳನ್ನು ಹಾಗೂ ಆಡಿಯೋಲಾಜಿಸ್ಟ್, ಬೆೆರಾ(ಕಿವಿ, ಮೂಗು, ಗಂಟಲು ಚೆಕ್ ಮಾಡುವುದು) ಪರೀಕ್ಷೆ ಮಾಡುವ ಹಾಗೂ ಬುದ್ಧಿಮಾಂದ್ಯತೆಯ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ.

ಡಯಾಸಿಲಿಸ್ ಕೊಠಡಿಗೆ ಯುಪಿಎಸ್ ಕನೆಕ್ಷನ್ ಇಲ್ಲ

ಆಸ್ಪತ್ರೆಗೆ ಬರುವ ಡಯಾಲಿಸಿಸ್ ರೋಗಿಗಳು ತಪಾಸಣೆಗೆ ಬಂದಾಗ ವಿದ್ಯುತ್ ಸಂಪರ್ಕ ಕಡಿತಗೊಂಡರೆ ಡಯಾಲಿಸಿಸ್ ಯಂತ್ರದ ಕೊಠಡಿಗೆ ಯುಪಿಎಸ್ ಸಂಪರ್ಕ ಇಲ್ಲದಾಗಿದೆ. ಇದರಿಂದ ಎರಡು, ಮೂರು ಗಂಟೆ ಕಾಯ್ದು ವಿದ್ಯುತ್ ಸಂಪರ್ಕ ಬಂದ ನಂತರ ಡಯಾಲಿಸಿಸ್ ಪರೀಕ್ಷೆ ಮಾಡಿಸಿಕೊಂಡು ಹೋಗಬೇಕಾಗಿದೆ.

ಶಾಸಕರು, ಡಿಎಚ್‌ಒ ಭೇಟಿ

ಈಚೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಸರಿಪಡಿಸಲು ಆರೋಗ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಎಚ್ಚರಿಕೆ ಕೊಟ್ಟು ಸುಧಾರಣೆಗೆ ಸೂಚಿಸಿದ್ದರು. ಇದರ ನಂತರ ಡಿಎಚ್‌ಒ ಮಂಜುನಾಥ ಡಿ.ಎನ್. ಸಹ ಆಸ್ಪತ್ರೆಗೆ ಭೇಟಿ ನೀಡಿ ಉತ್ತಮ ಆರೋಗ್ಯ ಸೇವೆ ಅಗತ್ಯ ಸಲಹೆ, ಸೂಚನೆ ನೀಡಿದ್ದಾರೆ.

ಒಟ್ಟಾರೆಯಾಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಬೇಕಾಗುವ ಅಗತ್ಯ ಮಷಿನ್‌ಗಳನ್ನು ಹಾಗೂ ಅಗತ್ಯ ವೈದ್ಯರು, ಸಿಬ್ಬಂದಿ ನೇಮಕ ಮಾಡಿ ಉತ್ತಮ ಆರೋಗ್ಯ ಸೇವೆ ಕೊಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ನೇತ್ರ ಪರೀಕ್ಷೆ ಮಾಡಲು ಅಟೋ ರಿಪ್ಲೆಕ್ಷನ್​ ಟೆಸ್ಟ್, ಫೀಲ್ಡ್ ಟೆಸ್ಟ್ ಮಾಡಲು ನಮ್ಮ ಬಾದಾಮಿ ತಾಲೂಕು ಆಸ್ಪತ್ರೆಯಲ್ಲಿ ಮಷಿನ್‌ಗಳು ಇಲ್ಲ. ಬಾಗಲಕೋಟೆಯ ನವನಗರದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜು (ಕುಮಾರೇಶ್ವರ ಆಸ್ಪತ್ರೆ) ಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬಂದ ನಂತರ ಚೆಕ್ ಮಾಡಿ ನೋಡುತ್ತೇನೆ. -ಡಾ. ಸವಿತಾ ಕಡೆಮನಿ, ನೇತ್ರ ತಜ್ಞರು ತಾಲೂಕಾಸ್ಪತ್ರೆ, ಬಾದಾಮಿ ಬಾದಾಮಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಬೇಕಾಗುವ ಅಗತ್ಯ ಯಂತ್ರೋಪಕರಣ, ಅಗತ್ಯ ಸಲಕರಣೆ ಒದಗಿಸಲು ಈಚೆಗೆ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರಿಗೆ ಮನವಿ ಸಲ್ಲಿಸಲಾಗಿದೆ. -ಭೀಮಸೇನ ಚಿಮ್ಮನಕಟ್ಟಿ, ಶಾಸಕ