ಬಾದಾಮಿ: ಕೇವಲ ಶಿಕ್ಷಣ ಪಡೆದರೆ ಸಾಲದು. ಪ್ರತಿಯೊಬ್ಬರೂ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣವಾಗಬೇಕು, ಜಾತಿ ವ್ಯವಸ್ಥೆ ಹೋಗಬೇಕು ಎಂದು ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ 2020-21ನೇ ಸಾಲಿನಲ್ಲಿ ಪ್ರವೇಶ ಪಡೆದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿ ವಿತರಣೆ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿತ ಎರಡು ನೂತನ ಕೊಠಡಿಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇನ್ನು ಎರಡ್ಮೂರು ಕೊಠಡಿಗಳ ಅವಶ್ಯಕತೆ ಇದೆ. ಅದಕ್ಕೂ ಪ್ರಯತ್ನ ಮಾಡುವೆ ಎಂದ ಅವರು, ಕೆರೂರಿನಲ್ಲಿ ಪ್ರಥಮ ದರ್ಜೆ ಕಾಲೇಜಿಗೆ 29 ಎಕರೆ ಜಾಗ ಮಂಜೂರು ಮಾಡಿಸಿದ್ದೇನೆ. ಜಾಗ ನ್ಯಾಯಾಲಯದಲ್ಲಿ ವ್ಯಾಜ್ಯ ಇತ್ತು. ಅದು ನಮ್ಮಂತೆ ಆಯಿತು. ಲ್ಯಾಂಡ್ ಆರ್ಮಿ ಸೋಮಾರಿಗಳಿದ್ದಂತೆ ಕಾಣಿಸುತ್ತದೆ. ಕೆಲಸ ಪ್ರಾರಂಭಿಸಿ ಎಂದರೆ ಪ್ರಾರಂಭಿಸುತ್ತೇವೆ ಎಂದು ಕಾಲ ಹರಣ ಮಾಡುತ್ತಿದ್ದಾರೆ. ಆದರೆ, ನಾನು ಶುರು ಮಾಡುವವರೆಗೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಸಿಗಬೇಕು. ಅಂದಾಗ ಮಾತ್ರ ಜ್ಞಾನ ವಿಕಾಸವಾಗುತ್ತದೆ, ಬದುಕು ಅರ್ಥವಾಗುತ್ತದೆ. ಯಾರಿಗೆ ಜ್ಞಾನ ವಿಕಾಸವಾಗುತ್ತದೆ ಅಂಥವರು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ. ಬರೀ ಶಿಕ್ಷಣ ಪಡೆದರೆ ಸಾಲದು ಸಮಾಜದ ಋಣ ತೀರಿಸಬೇಕು. ಅದು ಬದುಕಿನ ಉದ್ದೇಶ ಅಂತಹ ಬದುಕು ಕಟ್ಟಿಕೊಳ್ಳುವ ಶಿಕ್ಷಣ ಸಿಗಬೇಕು ಎಂದರು.
ದಯವಿಟ್ಟು ವಿದ್ಯಾವಂತರು ಜಾತಿ ಮಾಡಬೇಡಿ, ಸರ್ವ ಧರ್ಮಗಳ ಸಮನ್ವಯದ ಸಮಾಜ ನಿರ್ಮಾಣವಾಗಬೇಕು. ನಮ್ಮ ಧರ್ಮ ಅನ್ನುವುದಕ್ಕಿಂತ ಬೇರೆ ಧರ್ಮವನ್ನು ವಿರೋಧ ಮಾಡಬೇಡಿ, ಪರಧರ್ಮ ಸಹಿಷ್ಣುತೆ ಇರಬೇಕು. ಅದು ಇಲ್ಲದೆ ಹೋದರೆ ಸರ್ವ ಧರ್ಮದ ಸಮನ್ವಯತೆ ಕಷ್ಟವಾಗುತ್ತದೆ. ಸಮಾಜದಲ್ಲಿ ಮೌಢ್ಯಗಳು ಇರಬಾರದು ಎಂದರು.
ಮುಖಂಡ ಎಸ್.ಡಿ.ಜೋಗಿನ, ಹೊಳೆಬಸು ಶೆಟ್ಟರ, ಶಿವಾನಂದ ಕುಳಗೇರಿ, ಪುರಸಭೆ ಸದಸ್ಯೆ ಯಮುನಾ ಹೊಸಗೌಡ್ರ, ಶೈಲಾ ಪಾಟೀಲ, ಬಿಇಒ ಎಂ.ಪಿ. ಮಾಗಿ ಇದ್ದರು. ಪ್ರಾಚಾರ್ಯ ಡಾ.ಜಿ.ಜಿ.ಹಿರೇಮಠ ಸ್ವಾಗತಿಸಿದರು. ಕವಿತಾ ಜಂಗವಾಡ ನಿರೂಪಿಸಿ, ವಂದಿಸಿದರು.