ಬಾದಾಮಿ: ತಾಲೂಕಿನ 7ನೇ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್ 1 ರಂದು ಸ್ಥಳೀಯ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸರ್ವಾಧ್ಯಕ್ಷರನ್ನಾಗಿ ಹಿರಿಯ ಇತಿಹಾಸ ಸಂಶೋಧಕ ಡಾ.ಶೀಲಾಕಾಂತ ಪತ್ತಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ರವಿ ಕಂಗಳ ಹೇಳಿದರು.
ಕಳೆದ ಐದು ದಿನಗಳಿಂದ ಸಾಹಿತ್ಯಾಸಕ್ತರು, ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಿರಂತರ ಸಭೆ ನಡೆಸಿ ಎಲ್ಲರ ಒಮ್ಮತದಂತೆ ನಿರ್ಣಯಿಸಲಾಗಿದೆ. ಐದು ಸಾಹಿತಿಗಳಲ್ಲಿ ಹಿರಿಯ ಸಾಹಿತಿಗಳಾದ ಡಾ.ಕರವೀರಪ್ರಭು ಕ್ಯಾಲಕೊಂಡ ಮತ್ತು ಡಾ.ಶೀಲಾಕಾಂತ ಪತ್ತಾರ ಅವರ ಸಾಹಿತ್ಯ ಸಂಶೋಧನೆ ಆಧರಿಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಡಾ.ಶೀಲಾಕಾಂತ ಪತ್ತಾರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು ಎಲ್ಲರ ಸಹಕಾರ ಅವಶ್ಯವಿದ್ದು, ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಹಾಗೂ ಇತರ ಗಣ್ಯರ ಆಗಮಿಸಲಿದ್ದಾರೆ. ಸ್ಥಳದ ಕೊರತೆ ನೀಗಿಸಲು ಹೊರಗಡೆ ಪೆಂಡಾಲ್ ವ್ಯವಸ್ಥೆ ಮಾಡಲಾಗುವುದು. ಪಿಕಾರ್ಡ್ ಬ್ಯಾಂಕ್ ಆವರಣದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾಹಿತ್ಯ ಭವನ ತಲುಪಲಿದೆ ಎಂದರು.
ಮಾ.1 ರಂದು ಬೆಳಗ್ಗೆ ಧ್ವಜಾರೋಹಣ, ಮೆರವಣಿಗೆ ಉದ್ಘಾಟನೆ ನಡೆಯಲಿದೆ. ನಂತರ ವಿಚಾರಗೋಷ್ಠಿ, ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರ ಬದುಕು ಬರಹ, ಬಹಿರಂಗ ಅಧಿವೇಶನ, ಸನ್ಮಾನ, ಸಮಾರೋಪ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಸಾಹಿತಿಗಳು ಸೇರಿ ತಾಲೂಕಿನ ಜನತೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು. ಸಾಹಿತಿ ಸದಾಶಿವ ಮರಡಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಬಸಮ್ಮ ನರಸಾಪುರ, ವಿ.ಎನ್. ಸಾತನ್ನವರ, ಉಮೇಶ ಜಾಧವ, ಎಸ್.ಆರ್. ರಾಯನಗೌಡರ ಹಾಜರಿದ್ದರು.
EndFragment