ಜಿಲ್ಲೆ

ಗ್ರಾಮೀಣ ಪ್ರತಿಭೆಗೆ ಒಲಿದ ಪಿಎಸ್‌ಐ ಹುದ್ದೆ

ಬಾದಾಮಿ: ಸಾಧನೆ ಮಾಡಬೇಕೆನ್ನುವ ಛಲ ಇದ್ದರೆ ಏನನ್ನಾದರೂ ಸಾಧನೆ ಮಾಡಬಹುದು ಎಂಬುದನ್ನು ತಾಲೂಕಿನ ಹಿರೇನಸಬಿ ಗ್ರಾಮದ ಪ್ರತಿಭಾವಂತ ಯುವತಿ ಮಹಾಲಕ್ಷ್ಮೀ ಕೋರನ್ನವರ ಸಾಧಿಸಿ ತೋರಿಸಿದ್ದಾರೆ. ರಾಜ್ಯಕ್ಕೆ ಪಿಎಸ್‌ಐ ಪರೀಕ್ಷೆಯಲ್ಲಿ 48 ನೇ ರ‌್ಯಾಂಕ್ ಪಡೆದು ಆಯ್ಕೆಯಾಗಿದ್ದಾರೆ.

ಬಾದಾಮಿ ತಾಲೂಕಿನ ಹಿರೇನಸಬಿ ಗ್ರಾಮದ ಕ್ಯಾತಪ್ಪ ಕೋರನ್ನವರ ಮತ್ತು ಕಮಲಾಕ್ಷಿ ದಂಪತಿ ಪುತ್ರಿ ಮಹಾಲಕ್ಷ್ಮೀ ಪ್ರಾಥಮಿಕ ಶಿಕ್ಷಣವನ್ನು ಹಿರೇಮುಚ್ಚಳಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ನಂದಗಡದ ಸಂಗೊಳ್ಳಿ ರಾಯಣ್ಣ ವಸತಿ ಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಧಾರವಾಡದ ಎಸ್‌ಡಿಎಂ ಕಾಲೇಜಿನಲ್ಲಿ, ಬಿಎಸ್ಸಿ (ಅಗ್ರಿ) ಮತ್ತು ಎಂಎಸ್ಸಿ (ಅಗ್ರಿ) ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕೃಷಿ ವಿವಿಯಲ್ಲಿ ಅಧ್ಯಯನ ಮಾಡಿದ್ದಾರೆ.

ಪಿಎಸ್‌ಐ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಛಲ ತೊಟ್ಟು 2018 ರಿಂದ ಸತತ ಅಧ್ಯಯನ ಮಾಡುತ್ತಿದ್ದ ಫಲವಾಗಿ ಈಗ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಎಸ್.ಪಿ. ರೂಪಾ ನಂತಹ ಮಹಿಳೆಯರು ನನಗೆ ಆದರ್ಶರಾಗಿದ್ದಾರೆ. ಪಿಎಸ್‌ಐ ಹುದ್ದೆಯಲ್ಲಿದ್ದುಕೊಂಡು ಸಮಾಜಸೇವೆ ಮಾಡಬಹುದು ಎಂದು ಪಿಎಸ್‌ಐ ಆಗಲು ಮನಸ್ಸು ಮಾಡಿದೆ ಎಂದು ಮಹಾಲಕ್ಷ್ಮೀ ಕೋರನ್ನವರ ಸಂತಸ ಹಂಚಿಕೊಂಡರು.

ಮಗಳು ಮಹಾಲಕ್ಷ್ಮೀ ಪ್ರಾಥಮಿಕ ಶಿಕ್ಷಣದಿಂದಲೂ ಪ್ರತಿಭಾವಂತಳು. ಚೆಸ್‌ನಲ್ಲಿ ರಾಷ್ಟ್ರಮಟ್ಟ ಪ್ರತಿನಿಧಿಸಿದ್ದಳು. ಅವಳನ್ನು ಯಾವುದಾದರೂ ಉನ್ನತ ಹುದ್ದೆಗೆ ಸೇರಿಸಬೇಕು ಎಂಬ ಆಸೆ ಇತ್ತು. ಈಗ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದು, ನನ್ನ ಕನಸು ನನಸಾಗಿದೆ.
- ಕಾತಪ್ಪ ಕೋರನ್ನವರ ಯವತಿ ತಂದೆ