ಬಾದಾಮಿ: ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣ ಬಾದಾಮಿ ಸಮೀಪದ ತಿಲಕವನದಲ್ಲಿ ನೆಲೆಸಿರುವ ಶಕ್ತಿ ದೇವತೆ ಶ್ರೀ ಬನಶಂಕರಿದೇವಿ ಜಾತ್ರೆ ರಥೋತ್ಸವವು ಜ.13ರಂದು ಸಂಜೆ 5ಗಂಟೆಗೆ ಸಂಭ್ರಮದಿಂದ ಜರುಗಲಿದೆ.
ಉತ್ತರ ಕರ್ನಾಟಕದ ಅತಿದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಹೊಂದಿರುವ ಈ ಜಾತ್ರೆ ಒಂದು ತಿಂಗಳು ದೇವಾಲಯದ ಸುತ್ತ ಹೊಸ ನಗರವನ್ನೇ ನಿರ್ಮಿಸಿದಂತೆ ಕಾಣುವುದು. ಪೂಜಾ ಸಾಮಗ್ರಿ, ಬಳೆ ಕುಂಕುಮ, ಗೃಹ ಬಳಕೆ ವಸ್ತುಗಳು, ಚಿಕ್ಕಮಕ್ಕಳಿಗೆ ಆಟಿಕೆ ಸಾಮಾನುಗಳು, ಹೊಟೇಲ್, ಖಾದಿ ಭಂಡಾರ, ಬಾಳೆಹಣ್ಣು, ಮಿಠಾಯಿ ಅಂಗಡಿಗಳ ಸಾಲು ಜಾತ್ರೆಯ ಮೆರಗು ಹೆಚ್ಚಿಸುತ್ತವೆ. ಜತೆಗೆ ರಾತ್ರಿ ರಂಗ ಕಲಾವಿದರಿಂದ ನಾಟಕ ಆಯೋಜಿಸಲಾಗುತ್ತದೆ.
ವರ್ಷದಲ್ಲಿ ಮೊದಲ ತಿಂಗಳಲ್ಲಿ ಬರುವ ಬನದ ಹುಣ್ಣಿಮೆ ವಿಶೇಷ ದಿನದಂದು ತಾಯಿ ದರ್ಶನ ಪಡೆಯಲು ಹೊರ ರಾಜ್ಯ ವಿವಿದ ಜಿಲ್ಲೆಗಳಿಂದ ಭಕ್ತರ ಜನಸಾಗರವೇ ಹರಿದು ಬರುತ್ತದೆ. ಇದಲ್ಲದೆ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಉತ್ತತ್ತಿ, ಹಣ್ಣು ಸಮರ್ಪಿಸುವದರ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ನಿರಂತರ ಒಂದು ತಿಂಗಳ ಕಾಲ ಜರುಗುವ ಜಾತ್ರೆಯ ಸವಿಯೇ ವಿಶಿಷ್ಟವಾದುದು.
ಬನಶಂಕರಿ ದೇವಾಲಯವನ್ನು 17ನೇ ಶತಮಾನದಲ್ಲಿ ಪೇಶ್ವೆ ಅರಸರು ನಿರ್ಮಿಸಿರಬಹುದೆಂದು ಹೇಳಲಾಗುತ್ತಿದೆ. ದೇವಾಲಯದ ಕಟ್ಟಡ ಕಪ್ಪು ಶಿಲೆಯ ಮುಖ ಮಂಟಪ, ಸಭಾ ಮಂಟಪವನ್ನು ಹೊಂದಿದ್ದು ಗರ್ಭಗುಡಿಯಲ್ಲಿ ಬನಶಂಕರಿ ದೇವಿ ಮೂರ್ತಿ ಪ್ರತಿಷ್ಟಾಪಿಸಲಾಗಿದೆ. ದೇವಾಲಯದ ಎದುರಿರುವ ಮೂರು ಸ್ತಂಭಗಳಲ್ಲಿ ಕಾರ್ತಿಕ ಮಾಸದಂದು ದೀಪ ಬೆಳಗಿಸಲಾಗುತ್ತದೆ.
ವಿಶಾಲವಾದ ಹರಿದ್ರಾತೀರ್ಥವು ಮೂರು ಬಾಗಗಳನ್ನು ಹೊಂದಿದ್ದು ಕಲ್ಲಿನ ಮಂಟಪ, ದೇಸಾಯಿ ಮಂಟಪ ಮತ್ತು ಮೂರು ಅಂತಸ್ತಿನ ದೀಪಸ್ತಂಭ (ಮಂಗನಮಹಲ) ಕಂಗೊಳಿಸುತ್ತಿದೆ.
ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದಂತೆ ಸುತ್ತಲಿ ನ ಪ್ರದೇಶಗಳಲ್ಲಿ ಮಳೆಯಿಲ್ಲದೆ ತತ್ತರಿಸಿ ಹೋಗಿದ್ದ ಜನರು ದೇವಿಯಲ್ಲಿ ಮೊರೆಯಿಟ್ಟಾಗ ಮಳೆ ತರಿಸಿ ತನ್ನ ಭಕ್ತರನ್ನು ಕಾಪಾಡಿದ್ದಾಳೆ. ಆದ್ದರಿಂದ ದೇವಿಗೆ ಶಾಕಾಂಬರಿ ಎಂಬ ಹೆಸರೂ ಇದೆ.
ಇಲ್ಲಿ ಪ್ರಮುಖವಾಗಿ ಮಕ್ಕಳಾಗದ ದಂಪತಿಗಳು ಹರಕೆ ಹೊತ್ತರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ಮಕ್ಕಳಾದ ಮೇಲೆ ಇಲ್ಲಿನ ಹರಿದ್ರಾತೀರ್ಥ ಹೊಂಡವನ್ನು ತೆಪ್ಪದ ಮೂಲಕ ದಾಟಿ ಹರಿಕಡೆ ತೀರಿಸುವ ಸಂಪ್ರದಾಯ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ರಥೋತ್ಸವದ ಹಿಂದಿನ ದಿನ ಅರ್ಚಕರು ದೇವಿಗೆ 108ಬಗೆಯ ತರಕಾರಿ ನೈವೇದ್ಯವನ್ನು ಅರ್ಪಿಸಿ ವನದುರ್ಗಾಂಬಾ ಹೋಮವನ್ನು ಕೈಗೊಳ್ಳುವರು. ಸುತ್ತಲಿನ ಗ್ರಾಮಗಳ ಭಕ್ತರು ದೇವಿಗೆ ಪಲ್ಲೇದ ಹಬ್ಬವೆಂದು ಆಚರಿಸುವರು. ಪತಿಯ ಮನೆಗೆ ತೆರಳಿದ ಮಹಿಳೆಯರು ಮತ್ತು ಬೀಗರು ಬನಶಂಕರಿದೇವಿಯ ಜಾತ್ರೆಗೆ ಬರುವರು. ಸಂಭಂದಿಕರು ಬೀಗರು ಜಾತ್ರೆಗೆ ಬರುವದೆಂದರೆ ಬಾದಾಮಿ ನಗರ ಮತ್ತು ಸುತ್ತಮುತ್ತಲಿನ ಮಹಿಳೆಯರಿಗೆ ಬಿಡುವಿಲ್ಲದೆ ಕೆಲಸ. ಮನೆಗೆ ಬಂದ ಬೀಗರನ್ನು ಸಂತೈಸಲು ಎಳ್ಳು ಹಚ್ಚಿದ ಸಜ್ಜೆ ಮತ್ತು ಜೋಳದ ರೊಟ್ಟಿ ಮಾಡುವರು. ಜಾತ್ರೆಯ ದಿನ ಸಿಹಿ ಗೋದಿಹುಗ್ಗಿ ಮತ್ತು ಗೋದಿಯ ಮಾದಲಿಯನ್ನು ಮಾಡುವರು.