ಜಿಲ್ಲೆ

ಬ್ಯಾಡಗಿ ರೈತರ ಧರಣಿ 5ನೇ ದಿನಕ್ಕೆ ; ಬರಗಾಲ ಘೊಷಣೆಗೆ ಆಗ್ರಹ

Haveri - Desk - Ganapati Bhat

ಬ್ಯಾಡಗಿ: ಇಲ್ಲಿನ ತಹಸೀಲ್ದಾರ್ ಕಾರ್ಯಾಲಯ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ರೈತರ ಧರಣಿ ಮುಂದುವರಿದಿದ್ದು, ಸೋಮವಾರ 5ನೇ ದಿನಕ್ಕೆ ಕಾಲಿಟ್ಟಿದೆ.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಅಹೋರಾತ್ರಿ ಧರಣಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಪ್ರಮುಖ ಬೇಡಿಕೆಯಾಗಿರುವ ತಾಲೂಕು ಬರಗಾಲ ಘೊಷಣೆ, ಶೇ. 25 ರಷ್ಟು ಮಧ್ಯಂತರ ವಿಮೆ ಜಾರಿಗೊಳಿಸುವ ಬೇಡಿಕೆ ಈಡೇರುವವರೆಗೂ ಹೋರಾಟ ಕೈಬಿಡುವುದಿಲ್ಲ. ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳ ಸರ್ಕಾರಿ ಕಾರ್ಯಕ್ರಮಗಳಿಗೆ ಘೕರಾವ್ ಹಾಕುತ್ತೇವೆ. ಅ. 9ರಂದು ಜರುಗುವ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮಕ್ಕೆ ಆಗಮಿಸುವ ಜನಪ್ರತಿಗಳ ವಿರುದ್ಧ ನಮ್ಮ ಹೋರಾಟ ಹೊರತು, ಕ್ರೀಡೆ, ಕ್ರೀಡಾಪಟುಗಳು, ಆಯೋಜಕರ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರು.

5 ಗ್ರಾಮಗಳಿಂದ ಭಜನಾ ತಂಡ:

ಭಾನುವಾರ ಅಹೋರಾತ್ರಿ ರೈತರ ಪ್ರತಿಭಟನೆಯಲ್ಲಿ ವಿವಿಧ ಗ್ರಾಮಗಳ ಸುಮಾರು 150ಕ್ಕೂ ಹೆಚ್ಚು ರೈತರು ಭಜನಾ ಸಾಮಗ್ರಿಗಳೊಂದಿಗೆ ಆಗಮಿಸಿದ್ದರು. ಸರ್ಕಾರಕ್ಕೆ ಎಚ್ಚರಿಸುವ ಜಾಗೃತ ಗೀತೆ, ರೈತಗೀತೆ ಹಾಗೂ ಧರ್ಮಗೀತೆಗಳನ್ನು ಹಾಡಿದರು. ಎಲ್ಲರಿಗೂ ರೈತರೇ ತಂದಿದ್ದ ರೊಟ್ಟಿ ಬುತ್ತಿ ಸವಿಯುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರತಿದಿನ 5ರಿಂದ 10 ಗ್ರಾಮಗಳ ರೈತರು ಪಾಲ್ಗೊಳ್ಳುವ ಮೂಲಕ ಹೋರಾಟ ಗಟ್ಟಿಗೊಳಿಸುತ್ತಿದ್ದಾರೆ.

ರುದ್ರಗೌಡ್ರ ಕಾಡನಗೌಡ್ರ, ಗಂಗಣ್ಣ ಎಲಿ, ನಿಂಗಪ್ಪ ಹೆಗ್ಗಣದ, ಚಂದ್ರಶೇಖರ ಉಪ್ಪಿನ, ಶಿವಯೋಗಿ ಗಡಾದ, ಮಲ್ಲೇಶ ಡಂಬಳ, ಕಿರಣ ಗಡಿಗೋಳ, ಮಂಜಯ್ಯ ಹಿರೇಮಠ ಇತರರಿದ್ದರು.