ಬ್ಯಾಡಗಿ: ಸರ್ಕಾರದ ವಿದ್ಯುತ್ ದರ ಏರಿಕೆ ಖಂಡಿಸಿ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿ ವತಿಯಿಂದ ನೀಡಿದ್ದ ಬಂದ್ ಕರೆಗೆ ಬ್ಯಾಡಗಿ ಪಟ್ಟಣದ ಮೆಣಸಿನಕಾಯಿ ವ್ಯಾಪಾರಸ್ಥರು ವಹಿವಾಟು ಸ್ಥಗಿತಗೊಳಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಏ. 1ರಿಂದ ಜಾರಿಗೆ ಬಂದಿರುವ ವಿದ್ಯುತ್ ದರ ಏರಿಕೆಯಿಂದ ಸಾಕಷ್ಟು ತೊಂದರೆಗೆ ಸಿಕ್ಕಿರುವ ರೈತಪರ ಉದ್ಯಮಿಗಳು ಹಾಗೂ ಸಾರ್ವಜನಿಕರಿಂದ ಸರ್ಕಾರದ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಇದನ್ನು ಖಂಡಿಸಿ ಅಲ್ಲಲ್ಲಿ ಪ್ರತಿಭಟನೆ, ಖಂಡನೆಗಳು ನಡೆದಿವೆ. ಸರ್ಕಾರದ ಗಮನಸೆಳೆಯುವ ಉದ್ದೇಶದಿಂದ ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆ ನೀಡಿದ್ದ ಬಂದ್ ಕರೆಗೆ ಸುಮಾರು 500ಕ್ಕೂ ಹೆಚ್ಚು ವರ್ತಕರು ಹಾಗೂ 30ಕ್ಕೂ ಹೆಚ್ಚು ಮೆಣಸಿನಕಾಯಿ ಶಿಥೀಲಿಕರಣ ಮಾಲೀಕರು, ಖಾರಪುಡಿ ಸಿದ್ಧ್ದಪಡಿಸುವ ಫ್ಯಾಕ್ಟರಿಗಳ ಮಾಲೀಕರು, ಕಾರ್ಮಿಕರು ವಹಿವಾಟು ಬಂದ್ ಮಾಡುವ ಮೂಲಕ ವಿದ್ಯುತ್ ಏರಿಕೆಗೆ ವಿರೋಧ ವ್ಯಕ್ತಪಡಿಸಿದರು.
ಮೆಣಸಿನಕಾಯಿ ವರ್ತಕರ ಸಂಘದ ಕಾರ್ಯದರ್ಶಿ ರಾಜು ಮೋರಗೇರಿ ಮಾತನಾಡಿ, ಮಾರುಕಟ್ಟೆ ಬೆಳವಣಿಗೆಯಲ್ಲಿ ರೈತರೇ ಪ್ರಮುಖರು. ರೈತರ ಬೆಳೆಯನ್ನು ಖರೀದಿದಾರರು, ವರ್ತಕರು ಮಧ್ಯಸ್ಥಿಕೆ ವಹಿಸುವ ಮೂಲಕ ಭಿನ್ನರೀತಿಯಲ್ಲಿ ವಹಿವಾಟು ನಡೆಸುತ್ತೇವೆ.
ರೈತರು ಹಾಗೂ ವರ್ತಕರ ನಡುವೆ ನಡೆಯುವ ಈ ವ್ಯವಹಾರ ಸ್ವಲ್ಪ ಹೆಚ್ಚು ಕಡಿಮೆಯಾದರೂ ವಹಿವಾಟಿನ ಮೇಲೆ ತೊಂದರೆಯಾಗಲಿದೆ. ಬ್ಯಾಡಗಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಮೆಣಸಿನಕಾಯಿ ಶಿಥೀಲಿಕರಣ ಘಟಕಗಳು ಹಾಗೂ 15ಕ್ಕೂ ಹೆಚ್ಚು ಖಾರಪುಡಿ ಉತ್ಪಾಧನೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಹಿಂದೆ ಕೋಲ್ಡ್ ಸ್ಟೋರೇಜ್ ಮಾಲೀಕರ ಹೆಸರಿಗೆ 1.20-1.40 ಲ.ರೂ. ವಿದ್ಯುತ್ ಬಳಕೆಯ ಪಾವತಿಯನ್ನು ನೀಡಲಾಗುತ್ತಿತ್ತು.
ಆದರೆ ಈ ಬಾರಿ 1.90 ಲ.ರೂ. ನಿಂದ 2 ಲ.ರೂ. ದಾಟಿವೆ. ಕೋಲ್ಡ್ ಸ್ಟೊರೇಜ್‌ಗೆ ಬಳಕೆ ಮಾಡಿದ ವಿದ್ಯುತ್ ಬಳಕೆ ಸಾವಿರ ಯೂನಿಟ್‌ಗೆ 4.20 ರೂ, 1500 ಯೂನಿಟ್ ತಲುಪಿದಾಗ 5 ರೂ. ಹಾಗೂ 2 ಸಾವಿರ ತಲುಪಿದಾದ 7 ರೂ. ದರ ನಿಗದಿಯಾಗಿತ್ತು. ಈಗ 2 ಸಾವಿರ ಯೂನಿಟ್‌ಗೂ 7.20 ರೂ. ಪೈ. ದರ ನಿಗದಿಪಡಿಸಿರುವುದು ಅನ್ಯಾಯವಾಗಿದೆ.
ಈಗ ಹೊರೆಯಾಗಿರುವ ನಷ್ಟವನ್ನು ಅನಿವಾರ್ಯವಾಗಿ ರೈತರು, ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೆ ಹಾಕಲೇಬೇಕಿದೆ. ಸರ್ಕಾರದ ವಿದ್ಯುತ್ ದರದಿಂದ ಜನಸಾಮಾನ್ಯರಿಗೆ ತೊಂದರೆ ಆಗಲಿದ್ದು, ಸರ್ಕಾರ ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ವಿದ್ಯುತ್ ದರ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಮಾರುಕಟ್ಟೆಯ ದಲ್ಲಾಲರ ಪ್ರಾಂಗಣದಲ್ಲಿ ಸೋಮವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ಮೆಣಸಿನಕಾಯಿ ಟೆಂಡರ್ ನಡೆಯಲಿದೆ. ಸೋಮವಾರ 8-10 ಸಾವಿರ ಚೀಲ ಹಾಗೂ ಗುರುವಾರ 3-4 ಸಾವಿರ ಚೀಲಗಳು ಆವಕವಾಗುತ್ತಿದ್ದವು. ಆದರೆ, ವಿದ್ಯುತ್ ದರ ಏರಿಕೆ ಖಂಡಿಸಿ ನಡೆಸಿದ ಬಂದ್ ಕರೆಯಿಂದ ಎಲ್ಲ ವಹಿವಾಟು ಸ್ಥಗಿತಗೊಂಡಿವೆ. ಹೀಗಾಗಿ ಎಪಿಎಂಸಿಗೆ ಬರಬೇಕಿದ್ದ ಲಕ್ಷಾಂತರ ರೂ. ಶುಲ್ಕ ಕೂಡ ಕೈತಪ್ಪಿದೆ.