ಜಮಖಂಡಿ ನಗರದ ಬಸವಭವನದಲ್ಲಿ ನಡೆದ ಕಾರ್ಯಕ್ರಮವನ್ನು ರೈತ ಮುಖಂಡ ಬಿ.ಎಸ್. ಸಿಂಧೂರ ಉದ್ಘಾಟಿಸಿದರು. ಪರಶುರಾಮ ಮಹಾರಾಜನವರ, ಗಿರೀಶ ಕಡಕೋಳ, ಡಾ.ವಿನಯಕುಮಾರ ಬಬಲೇಶ್ವರ, ಪ್ರಶಾಂತ ಜಂಬಗಿ, ದಶರಥ ಮಾದರ, ವಿಜಯ ಹಲಗಿಮನಿ ಇತರರಿದ್ದರು. 
ಜಿಲ್ಲೆ

ಮೀಸಲಾತಿ ವಿರುದ್ಧ ಕೆಟ್ಟದ್ದಾಗಿ ಪ್ರಚಾರ ಸಲ್ಲ

Vijayapura - Desk - Gurappa Lokuri

ಜಮಖಂಡಿ: ದೇಶದಲ್ಲಿ ಮೀಸಲಾತಿ ಬಗ್ಗೆ ಕೆಟ್ಟದ್ದಾಗಿ ಪ್ರಚಾರ ಮಾಡಲಾಗುತ್ತಿದೆ ಎಂದು ಸತ್ಯ ಶೋಧಕ ಸಂಘದ ಅಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು.

ನಗರದ ಬಸವಭವನದಲ್ಲಿ ಸತ್ಯ ಶೋಧಕ ಸಂಘದ ತಾಲೂಕು ಆಶ್ರಯದಲ್ಲಿ ಛತ್ರಪತಿ ಶಾಹು ಮಹಾರಾಜ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಭಾನುವಾರ ನಡೆದ ಮೀಸಲಾತಿ ಅಂದರೆ ಸಾಮಾಜಿಕ ಪ್ರಾತಿನಿಧ್ಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಮೀಸಲಾತಿ ಎಂದರೆ ಬಡತನ, ಹಸಿವು ದೂರಮಾಡುವುದು ಅಲ್ಲ, ಮೀಸಲಾತಿ ಎಂದರೆ ಸಾಮಾಜಿಕ ಪ್ರಾತಿನಿಧ್ಯವಾಗಿದೆ ಎಂದರು.

ದೇಶದಲ್ಲಿದ್ದ ಜಾತಿ ವ್ಯವಸ್ಥೆಗೆ ಬೇಸತ್ತು ಶೂದ್ರರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು. 12ನೇ ಶತಮಾನದಲ್ಲಿ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದರು. ಲಿಂಗಾಯತರೂ ಮೊದಲು ಶೂದ್ರರಾಗಿದ್ದರು. ಅವರು ಇಲ್ಲಿನ ಕೆಟ್ಟ ಜಾತಿ ವ್ಯವಸ್ಥೆಗೆ ಬೇಸತ್ತು ಸಾಮಾಜಿಕ ಪ್ರಾತಿನಿಧ್ಯಕ್ಕಾಗಿ ಲಿಂಗಾಯತ ಧರ್ಮಕ್ಕೆ ಹೋಗಿದ್ದಾರೆ. ಆದರೆ ಅಲ್ಲೂ ಅವರ ಜಿವನಮಟ್ಟ ಸುಧಾರಿಸಿಲ್ಲ, ಅದಕ್ಕೆ ಸಂವಿಧಾನದಲ್ಲಿ ಮುಸ್ಲಿಂ ಸೇರಿ ಕೆಲ ಧರ್ಮಗಳಿಗೆ ಮೀಸಲಾತಿ ಹಕ್ಕು ನೀಡಿದ್ದಾರೆ ಎಂದರು.

ದೇಶದಲ್ಲಿ ಮೊಟ್ಟಮೊದಲು 102 ವರ್ಷಗಳ ಹಿಂದೆ ಕೊಲ್ಹಾಪುರದ ಛತ್ರಪತಿ ಶಾಹೂ ಮಹಾರಾಜರು ಮೀಸಲಾತಿ ಕಲ್ಪಿಸುವುದರೊಂದಿಗೆ, ಶೂದ್ರರ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಪದ್ಧತಿ ಜಾರಿಗೆ ತಂದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಶಾಹೂ ಮಹಾರಾಜರ ಮೀಸಲಾತಿ ಕನಸನ್ನು ಅಂಬೇಡ್ಕರ್ ಅವರು ದೇಶದ ಎಲ್ಲ ಹಿಂದುಳಿದ ಜನಾಂಗಕ್ಕೆ ಹಕ್ಕಾಗಿ ನೀಡಿದ್ದಾರೆ. ಪ್ರಪಂಚದ ಮುಂದುವರಿದ ದೇಶದ ಅಮೆರಿಕ ಸೇರಿ 26 ರಾಷ್ಟ್ರಗಳಲ್ಲಿ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲೂ ಮೀಸಲಾತಿ ಸೌಲಭ್ಯ ಇದೆ. ಆದರೆ, ನಮ್ಮ ದೇಶದಲ್ಲಿ ಸರ್ಕಾರಿ ಆಡಳಿತದಲ್ಲಿ ಮಾತ್ರ ಮೀಸಲಾತಿ ಇದೆ. ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ಸೌಲಭ್ಯ ಇಲ್ಲದಿರುವುದು ದುರಂತ. ಡಿಸೆಂಬರ್‌ನಲ್ಲಿ ಬಾಗಲಕೋಟೆಯಲ್ಲಿ 10 ಸಾವಿರ ಜನರನ್ನು ಸೇರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೆ ಬರುವಂತೆ ಹೋರಾಟ ಮಾಡಿ ಒತ್ತಾಯಿಸಲಾಗುವುದು ಎಂದರು.

ಕಾಂಗ್ರೆಸ್ ಮುಖಂಡ ಬಿ.ಎಸ್. ಸಿಂಧೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಛತ್ರಪತಿ ಶಾಹೂ ಮಹಾರಾಜರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಒಂದೇ ಸಮಾಜಕ್ಕೆ ಸೀಮಿತರಲ್ಲ. ಅವರು ಸಂವಿಧಾನದ ಮೂಲಕ ಧಮನಿತರಿಗೆ ಧ್ವನಿ ನೀಡುವುದರೊಂದಿಗೆ ಹಕ್ಕು ನೀಡಿ ಸಮಾನತೆ ತರುವಲ್ಲಿ ಅವರ ಕಾರ್ಯ ಸ್ಮರಣೀಯವಾಗಿದೆ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಸಭಿಕರಿಗೆ ಉಚಿತವಾಗಿ ಸಂವಿಧಾನ ಓದು ಪುಸ್ತಕ ವಿತರಿಸಿದರು. ಗಿರೀಶ ಕಡಕೋಳ, ಡಾ. ವಿನಯಕುಮಾರ ಬಬಲೇಶ್ವರ, ಪ್ರಶಾಂತ ಜಂಬಗಿ, ದಶರಥ ಮಾದರ, ವಿಜಯ ಹಲಗಿಮನಿ, ಕಾನಿಪ ಸಂಘದ ತಾಲೂಕು ಅಧ್ಯಕ್ಷ ಪೀರ ಕೊಡತಿ, ಶರಣಪ್ಪ ಆರ್ಯವಗೋಳ, ಉಸ್ಮಾನಶಾ ಮಕಾಂದಾರ, ಶಂಕರಾನಂದ ಕುಂಚನೂರ, ಸಂಗಮೇಶ ನಾಗನೂರ, ಪ್ರಭು ಬಿದರಿ, ಜಯವಂತ ದಬಾಣಿ, ಆನಂದ ಖರಾತ, ರಾಜೇಸಾಬ ಗೋರೆಖಾನ, ಶಂಭುಲಿಂಗ ಕಾಂಬಳೆ ಇತರರಿದ್ದರು.

ರಮೇಶ ಹಾದಿಮನಿ ಸಂವಿಧಾನ ಪೀಠಿಕೆ ಓದಿದರು. ಸುಭಾಸ ಹಾದಿಮನಿ ನಿರೂಪಿಸಿದರು. ಸತ್ಯಪ್ಪ ಕಾಂಬಳೆ ವಂದಿಸಿದರು.