ಬೆಂಗಳೂರು: ಕಾಂತರಾಜು ಆಯೋಗ ಸಿದ್ಧಪಡಿಸಿರುವ ವರದಿಯನ್ನು ಈಗಾಗಲೇ ಸರ್ಕಾರ ಸ್ವೀಕಾರ ಮಾಡಿದ್ದು, ಜಾತಿ ಗಣತಿಯು ಸದ್ಯದಲ್ಲೇ ಸಚಿವ ಸಂಪುಟ ಸಭೆಗೆ ಬರಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಕಲ್ಯಾಣದ ವಿಷಯದಲ್ಲಿ ಬದ್ಧತೆಯನ್ನು ಹೊಂದಿದ್ದಾರೆ. ಕಾಂತರಾಜು ಅವರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವರದಿಯ ಸಾಧಕ ಬಾಧಕಗಳ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು. ಯಾವುದೇ ಸಮುದಾಯಕ್ಕೂ ನೋವಾಗದಂತೆ ವರದಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ಸಿಎಂ ಚಿಂತನೆ ನಡೆಸುತ್ತಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರೇ ಹಿಂದುಳಿದ ಸಮಾಜದ ಸ್ಥಿತಿಗತಿ ಬಗ್ಗೆ ತಿಳಿಯಲು ಆಯೋಗ ರಚಿಸಿದ್ದರು. ಸದ್ಯ ಅವರೇ ಮತ್ತೆ ಮುಖ್ಯಮಂತ್ರಿ ಆಗಿರುವುದರಿಂದ ವರದಿ ಸ್ವೀಕಾರ ಮಾಡಿದ್ದಾರೆ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಇದ್ದ ಕಾರಣಕ್ಕೆ ಕೆಲಕಾಲ ವಿಳಂಬವಾಗಿದೆ. ಆದರೆ ಮುಂದಿನ ಕೆಲವೇ ಸಮಯದಲ್ಲಿ ವರದಿಯ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದಲ್ಲಿ ನಾಯಕತ್ವ ಬದಲಾವಣೆ, ಜಾತಿಗೊಂದು ಡಿಸಿಎಂ ಎಂಬ ಕೂಗು ಕೇಳಿಬರುತ್ತಿರುವುದರ ಹಿನ್ನಲೆಯಲ್ಲಿ ತಾವು ಕೂಡಾ ಡಿಸಿಎಂ ಅಥವಾ ಪಕ್ಷದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ತಂಗಡಗಿ, ಪಕ್ಷದ ನಾಯಕರು ನನ್ನನ್ನು ಗುರುತಿಸಿ ಎರಡು ಬಾರಿ ಮಂತ್ರಿ ಮಾಡಿದ್ದು, ನಾನು ಕೆಪಿಸಿಸಿ ಅಧ್ಯಕ್ಷನಾಗುವಷ್ಟು ದೊಡ್ಡವನಲ್ಲ. ನನಗೆ ಈಗ ಕೊಟ್ಟಿರುವ ಜವಾಬ್ದಾರಿಯಲ್ಲೇ ತೃಪ್ತಿ ಇದೆ ಎಂದು ಹೇಳಿದರು.
ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಕೂಗು ಎದ್ದಿರುವುದರ ಕುರಿತು ಕೇಳಿದ ಪ್ರಶ್ನೆಗೆ ಅದು ಅವರ ಅಭಿಪ್ರಾಯ. ಈ ಬಗ್ಗೆ ನಾನು ಚರ್ಚೆ ಮಾಡುವ ಅಗತ್ಯ ಇಲ್ಲ. ನನ್ನ ಆದ್ಯತೆ ಪಕ್ಷ ನಿಷ್ಠೆ ಹಾಗೂ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ನೀಡುವ ಆದೇಶ ಪಾಲಿಸುವುದಷ್ಟೇ ಎಂದರು.