ಜಿಲ್ಲೆ

ಮೀಸಲಾತಿ ಕಸಿದುಕೊಳ್ಳಲು ಬಿಜೆಪಿ ಸಂಚು, ಇದಕ್ಕೆ ಜೆಡಿಎಸ್ ಸಹಕಾರ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪ

ಕೆ.ಎನ್.ರಾಘವೇಂದ್ರ

ಮಂಡ್ಯ: ಸಂವಿಧಾನಬದ್ಧವಾಗಿ ಹಿಂದುಳಿದವರಿಗೆ ಸಿಗುತ್ತಿರುವ ಮೀಸಲಾತಿ ಸೇರಿದಂತೆ ಸವಲತ್ತುಗಳನ್ನು ಕಸಿದುಕೊಳ್ಳಲು ಬಿಜೆಪಿ ಸಂಚು ರೂಪಿಸುತ್ತಿದೆ. ಇದಕ್ಕೆ ಜೆಡಿಎಸ್ ಕೂಡಾ ಬೆಂಬಲ ನೀಡುತ್ತಿವೆ. ಈ ಎರಡೂ ಪಕ್ಷಗಳು ಹಿಂದುಳಿದವರ ವಿರೋಧಿಗಳಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ದೂರಿದರು.

ನಗರದ ಕನಕ ಭವನದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ಅತೀ ಹಿಂದುಳಿದ ಅಸಂಘಟಿತ ಹಿಂದುಳಿದ ಸಮಾಜಗಳ ಶ್ರೇಯೋಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರ ಬದ್ಧವಾಗಿದೆ. ಎಲ್ಲ ಜಾತಿ ಮತ್ತು ವರ್ಗದವರಿಗೂ ಕಾಂಗ್ರೆಸ್ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದೆ. ಅತೀ ಹಿಂದುಳಿದವರ ಕಲ್ಯಾಣಕ್ಕೆ ವಿಶೇಷ ಆದ್ಯತೆ ನೀಡಿದೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಎಲ್ಲ ಸಮಾಜಗಳು ಒಗ್ಗೂಡಿ ಬೃಹತ್ ಶಕ್ತಿಯಾಗಿ ಕಾಂಗ್ರೆಸ್ ಬೆಂಬಲಕ್ಕೆ ನಿಂತಿರುವುದು ನಮಗೆ ಬಲ ಬಂದಂತಾಗಿದೆ. ಅತೀ ಹಿಂದುಳಿದ ಸಮಾಜಗಳು ಹಲವು ಸಮಸ್ಯೆ-ಸವಾಲುಗಳನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳೊಡನೆ ಮಾಸಿಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು. ಅಲ್ಲದೆ ಸಮಾಜಗಳ ಅಭಿವೃದ್ಧಿಗೆ ಅಗತ್ಯ ನಿವೇಶನ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ತಳಸಮುದಾಯಗಳಿಗೆ ಕಾಂಗ್ರೆಸ್‌ನ ತಳಹದಿ. ಇವುಗಳನ್ನು ರಕ್ಷಣೆ ಮತ್ತು ಅಭಿವೃದ್ಧಿ ಮೂಲಕವೇ ಕಾಂಗ್ರೆಸ್ ಬಲವರ್ಧನೆ ಆಗಿದೆ. ಜಿಲ್ಲೆಯಲ್ಲಿ ಅತೀ ಹಿಂದುಳಿದ ಸಮಾಜಗಳ ಬೇಡಿಕೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಚ್.ನಾಗರಾಜ್, ಜಿ.ಪಂ ಮಾಜಿ ಸದಸ್ಯ ಯೋಗೇಶ್, ಜಿ.ಪಂ ಮಾಜಿ ಅಧ್ಯಕ್ಷ ಬಿ.ಲಿಂಗಯ್ಯ, ವಿವಿಧ ಹಿಂದುಳಿದ ಸಮಾಜದ ಅಧ್ಯಕ್ಷರಾದ ಎಚ್.ಪಿ.ಸತೀಶ್, ಎಂ.ಕೃಷ್ಣ, ಡಿ.ರಮೇಶ್, ಪುಟ್ಟಸ್ವಾಮಿ, ಸುರೇಶ್, ಪ್ರತಾಪ್, ಕನ್ನಲಿ ದೇವರಾಜ್, ಸಂತೆಕಸಲಗೆರೆ ಬಸವರಾಜ್, ಗೋವಿಂದಸ್ವಾಮಿ, ನಾಗರತ್ನ, ಗಾಯತ್ರಿ, ರಾಜಣ್ಣ, ಶಶಿಕುಮಾರ್ ಇತರರಿದ್ದರು.