ಶಿವಮೊಗ್ಗ ಕಾಂಗ್ರೆಸ್ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಪರಾಮರ್ಶೆ ಸಭೆಯಲ್ಲಿ ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಮಾತನಾಡಿದರು. ಮಧು ಬಂಗಾರಪ್ಪ, ಎಚ್.ಆಂಜನೇಯ, ಬಲ್ಕೀಶ್ ಬಾನು, ಅಹಮ್ಮದ್, ಆರ್.ಪ್ರಸನ್ನಕುಮಾರ್, ಎಚ್.ಎಸ್.ಸುಂದರೇಶ್, ಎಸ್.ರವಿಕುಮಾರ್, ಎನ್.ರಮೇಶ್, ಎಚ್.ಸಿ.ಯೋಗೇಶ್ ಇತರರಿದ್ದರು. 
ಜಿಲ್ಲೆ

ಮತೀಯವಾದಿಗಳಿಂದ ಕಾಂಗ್ರೆಸ್‌ಗೆ ಹಿನ್ನೆಡೆ: ಉಗ್ರಪ್ಪ

ನವೀನ ಬಿ.ಎಂ

ಶಿವಮೊಗ್ಗ: ವೈಚಾರಿಕ ಜನರಿರುವ ಶಿವಮೊಗ್ಗ ಜಿಲ್ಲೆಯಲ್ಲೇ ಮತೀಯವಾದಿಗಳು ವಿಜೃಂಭಿಸುತ್ತಿದ್ದಾರೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿದೆ. ಜಾತಿ, ಹಣ, ಧರ್ಮಕ್ಕೆ ಜನರು ಬಲಿಯಾಗಿದ್ದು, ಈ ಬಗ್ಗೆ ಮಾಹಿತಿ ಪಡೆದು ವರದಿ ನೀಡಲಾಗುವುದು ಎಂದು ವಿ.ಎಸ್.ಉಗ್ರಪ್ಪ ಹೇಳಿದರು.

ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಲೋಕಸಭಾ ಚುನಾವಣೆ ಕುರಿತ ಸತ್ಯಶೋಧನಾ ಸಭೆಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಆದ ಲೋಪಗಳನ್ನು ಸರಿಪಡಿಸಬೇಕು. ಸಂಘಟನೆ ಬಲಪಡಿಸಬೇಕೆಂದು ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಬಂದಿದ್ದೇವೆ ಎಂದರು.
ನಮ್ಮಲ್ಲಿ ಮೂರು ವರ್ಗದ ಕಾರ್ಯಕರ್ತರಿದ್ದು, ಒಂದು ವರ್ಗ ನಾಯಕರ ಹಿಂದೆಯೇ ಪ್ರದಕ್ಷಿಣೆ ಹಾಕುತ್ತ ಬೇಳೆ ಬೇಯಿಸಿಕೊಳ್ಳುತ್ತಾರೆ. ಬಾಕಿ ಸಂದರ್ಭದಲ್ಲಿ ಅವರು ಕಾಣುವುದಿಲ್ಲ. ಇನ್ನೊಂದು ವರ್ಗ ಕೇವಲ ಫೋಟೋಗಾಗಿ ಮಾತ್ರ ಓಡಾಡುತ್ತದೆ. ಮೂರನೇ ವರ್ಗ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತ ಜನರ ನಡುವೆಯೇ ಇದ್ದು, ಲಾಪೇಕ್ಷೆ ಇಲ್ಲದೆ, ಕಾರ್ಯ ನಿರ್ವಹಿಸುತ್ತ ನಾಯಕರೆನಿಸಿಕೊಂಡಿದ್ದಾರೆ. ನಾಯಕನಾಗಬೇಕಾದರೆ ಆತ ಜನರ ಮಧ್ಯೆ ಇದ್ದು ಸ್ಪಂದಿಸಬೇಕು. ಮಾಧ್ಯಮದವರೊಂದಿಗೆ ನಿಕಟ ಸಂಪರ್ಕ ಹೊಂದಿ, ಪಕ್ಷದ ಗುಣಾತ್ಮಕ ಚಟುವಟಿಕೆಗಳ ಬಗ್ಗೆ ವಿಚಾರ ವಿನಿಮಯ ಮಾಡಬೇಕು. ಪಕ್ಷದ ನಾಯಕರೇ ತಪ್ಪು ಮಾಡಿದಲ್ಲಿ ಮುಲಾಜಿಲ್ಲದೆ ಎಚ್ಚರಿಕೆ ನೀಡಬೇಕು ಎಂದರು.
ಸಮಾಜವಾದಿ ನೆಲೆಯಲ್ಲಿ ನಾಯಕತ್ವ ಬೆಳೆಸಿಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಅವರ ಮೇಲೆ ಗೂಬೆ ಕೂರಿಸುವ ವ್ಯವಸ್ಥಿತ ಸಂಚು ನಡೆಯುತ್ತಿದ್ದು, ಅದನ್ನು ವಿಲ ಮಾಡಬೇಕು. ನಿಮ್ಮೆಲ್ಲರ ಅಭಿಪ್ರಾಯ ಪಡೆದು ಹೈಕಮಾಂಡ್‌ಗೆ ವರದಿ ನೀಡುತ್ತೇವೆ ಎಂದರು.
ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಎಂಎಲ್‌ಸಿ ಬಲ್ಕೀಶ್ ಬಾನು, ಸತ್ಯಶೋಧನ ಸಮಿತಿ ಸದಸ್ಯ ಅಹಮ್ಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಪ್ರಮುಖರಾದ ಎಸ್.ರವಿಕುಮಾರ್, ಕಲಗೋಡು ರತ್ನಾಕರ್, ಎನ್.ರಮೇಶ್, ಎಚ್.ಸಿ.ಯೋಗೇಶ್, ಎಂ.ಶ್ರೀಕಾಂತ್, ನಾಗರಾಜ್ ಗೌಡ, ಶ್ರೀನಿವಾಸ್ ಕರಿಯಣ್ಣ ಮತ್ತಿತರರು ಉಪಸ್ಥಿತರಿದ್ದರು.