ಶ್ರೀರಂಗಪಟ್ಟಣ: ಬುದ್ಧನ ಪಂಚಶೀಲ ತತ್ವಗಳ ಅನುಸಾರ ಭರತ ನೆಲದ ಮೂಲಸಂಸ್ಕೃತಿಯನ್ನು ಉಳಿಸಿಕೊಂಡು ಮುಂದುವರಿಸುವಲ್ಲಿ ಮಾತಂಗ ಪರಿವಾರ (ಮಾದಿಗ ಸಮುದಾಯ) ಪ್ರಮುಖ ಪಾತ್ರವಹಿಸಿದೆ ಎಂದು ಕರ್ನಾಟಕ ರಾಜ್ಯ ಮಾದಿಗರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ತಿಳಿಸಿದರು.
ಪಟ್ಟಣದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೈಸೂರು ವಿಭಾಗೀಯ ಮಟ್ಟದ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ವಿಶ್ವಕ್ಕೆ ಶಾಂತಿ ಮತ್ತು ಜ್ಞಾನದ ಬೆಳಕು ತೋರಿದ ಭಗವಾನ್ ಬುದ್ಧರು ಸಾಕ್ಯ ವಂಶಸ್ಥರಾಗಿದ್ದು, ಅವರ ಮನೆತನಕ್ಕೆ ಸೇರಿದ ಮಾತಂಗ ಪರಿವಾರವೇ ಈ ಮಾದಿಗ ಸಮುದಾಯ. 3ನೇ ಶತಮಾನದಲ್ಲಿ ಮಾದಿಗರು ಸಹ ರಾಜ್ಯಭಾರ ನಡೆಸಿರುವ ಇತಿಹಾಸಗಳಿವೆ. ಭರತ ನೆಲದ ಮೂಲವಾಸಿಗಳಾದ ಮಾತಂಗ ಪರಿವಾರ, ಆದಿಜಾಂಬವ ಸೇರಿದಂತೆ ಹಲವು ವರ್ಗಗಳ ಜನರು ಹಿಂದುತ್ವದ ಭಾಗವಾಗದೆ ದೂರ ಉಳಿದು ಭಗವಾನ್ ಬುದ್ಧರ ಅನುಯಾಯಿಗಳಾಗಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬಂದಿದ್ದೇವೆ. ನಮ್ಮ ಸಂತರಾದ ಸಮಗಾರ ಹರಳಯ್ಯ ಹಾಗೂ ಮಾದಾರ ಚೆನ್ನಯ್ಯರು ತತ್ವಗಳಲ್ಲಿ ಇವುಗಳನ್ನೇ ಸಾರಿದ್ದಾರೆ. ಹೀಗಾಗಿ ದಾಖಲೆಗಳಿರದ ಹಿಂದುತ್ವವಾದಕ್ಕೆ ಕಿವಿಗೊಡದೆ ಸಾಮಾಜಿಕ ಹಾಗೂ ಸೌಹಾರ್ದಕ್ಕೆ ಬದ್ಧತೆಯಾಗಿರುವ ಬೌದ್ಧ ಧರ್ಮಕ್ಕೆ ಮರಳಿ ಎಂದು ಕರೆ ನೀಡಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ನಿವೃತ್ತ ಉಪವಿಭಾಗಾಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ, ವಿಶ್ವದಲ್ಲಿ ಭಾರತ ಅತ್ಯಾಧುನಿಕ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಗುರುತಿಸಿಕೊಂಡಿದ್ದರೂ ಡಾ.ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನದ ಅಡಿಯಲ್ಲಿ ಜಾತೀಯತೆ ತೊಡೆದು ಸಮಾನತೆಯ ಸಮಾಜ ಇನ್ನೂ ನಿರ್ಮಾಣವಾಗಿಲ್ಲ. ಮಾದಿಗ ಸಮುದಾಯ ಶೋಷಿತರಲ್ಲಿ ಒಳಗೊಂಡಿದ್ದರೂ ಸಹ ಜಾತಿ ಕಾರಣದಿಂದಲೇ ಇತರ ಸಮುದಾಯದಂತೆ ರಾಜಕೀಯ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸದೆ ಹಿಂದುಳಿದಿದೆ. ಭವಿಷ್ಯತ್ತಿನಲ್ಲಿ ಮಾದಿಗ ಸಮುದಾಯವು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸದೃಢರಾಗಲು ನಮ್ಮವರು ಸಂಘಟಿತರಾಗಿ ಶಿಕ್ಷಣದಿಂದ ಸಮಾಜದ ಮುನ್ನೆಲೆಗೆ ಬನ್ನಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಮ್ ಜನಜಾಗೃತಿ ಒಕ್ಕೂಟದ ಜಿಲ್ಲಾಧ್ಯಕ್ಷ ಅರಕೆರೆ ಸಿದ್ದರಾಜು, ತಾಲೂಕು ಅಧ್ಯಕ್ಷ ಕೊಡಿಯಾಲ ಆಟೋ ಶಂಕರ್, ಕಾರ್ಯದರ್ಶಿ ಭಾರತೀಯ ಬೌದ್ಧ ಮಹಾಸಭಾದ ಮಾಜಿ ತಾಲೂಕು ಅಧ್ಯಕ್ಷ ಕೆ.ಟಿ.ರಂಗಯ್ಯ, ದಸಂಸ ಜಿಲ್ಲಾ ಸಂಚಾಲಕ ನಂಜುಂಡ ಮೌರ್ಯ, ಸಂಘದ ಉಪಾಧ್ಯಕ್ಷ ಮೋಹನ್ ಕುಮಾರ್, ಮಹಿಳಾ ವಿಭಾಗದ ಅಧ್ಯಕ್ಷೆ ಸುಮಿತ್ರಾ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.