ಹಾವೇರಿ: ಮಕ್ಕಳು ಜನ್ಮದಿನದಂದು ಕೇಕ್ ಕತ್ತರಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಕವಿ, ಶಿಕ್ಷಕರು ತಮ್ಮ ಮಗಳ ಜನ್ಮದಿನವನ್ನು ‘ಮಕ್ಕಳಿಂದ ಕವಿತೆ ವಾಚನ’ ಕಾರ್ಯಕ್ರಮ ಆಯೋಜಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.
ಇಲ್ಲಿನ ಶಿವಾಜಿ ನಗರದ ನಾಲ್ಕನೇ ಕ್ರಾಸ್ ನಿವಾಸಿ ಶಿಕ್ಷಕ, ಕವಿ ನಾಗರಾಜ ಹುಡೇದ ಅವರು ತಮ್ಮ ಮಗಳಾದ ಹರ್ಷಿತಾಳ ಜನ್ಮದಿನದ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಮುದ್ದು ಮಕ್ಕಳು ದಿಗ್ಗಜ ಕವಿಗಳಾದ ದ.ರಾ.ಬೇಂದ್ರೆ, ಚನ್ನವೀರ ಕಣವಿ, ರಾಜರತ್ನಂ, ದಿನಕರ ದೇಸಾಯಿ, ಮತ್ತಿತರ ಕವಿಗಳ ಕವಿತೆಗಳನ್ನು ವಾಚಿಸಿದರು. ಮಕ್ಕಳ ಕವಿತೆ ವಾಚನ ಕಂಡು ಹಿರಿಯರು ಬೆಕ್ಕಸ ಬೆರಗಾದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಚಂದ್ರಪ್ಪ ಸನದಿ ಮಾತನಾಡಿ, ಮಕ್ಕಳಲ್ಲಿ ಎಲ್ಲವನ್ನೂ ಕುತೂಹಲದಿಂದ ಆಲಿಸುವ ಮತ್ತು ಅನುಕರಿಸುವ ಶಕ್ತಿ ಇರುತ್ತದೆ. ಹೀಗೆಂದೇ ಬೇಂದ್ರೆ, ಕಣವಿ ಅವರಂತಹ ದಿಗ್ಗಜರು, ಮಕ್ಕಳ ಕಾವ್ಯ ಬರೆದರು. ಇಂದು ಅಂತಹ ಸಾಹಿತ್ಯ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಮಹಾದೇವ ಹುಡೇದ, ಕಲಾವಿದ ಕರಿಯಪ್ಪ ಹಂಚಿನಮನಿ, ಅಮೃತಾ ಹುಡೇದ, ನೇತ್ರಾ ಅಂಗಡಿ, ಶಶಿಕಲಾ ಅಕ್ಕಿ, ಈರಣ್ಣ ಬೆಳವಡಿ, ನಾಗರಾಜ ಹುಡೇದ, ಚಂದ್ರಶೇಖರ ಮಾಳಗಿ, ಲಲಿತಾ ಮರೆಕ್ಕನವರ, ಪ್ರಕಾಶಗೌಡ ಪಾಟೀಲ, ಸವಿತಾ ಮಣ್ಣಮ್ಮನವರ, ಶಂಕರ ಬಡಿಗೇರ, ಭಾರತಿ ಯಾವಗಲ್, ರೇಣುಕಾ ಗುಡಿಮನಿ, ಪ್ರಣವ ಹುಡೇದ, ನಯನಾ ಸೌಜನ್ಯ, ಇತರರಿದ್ದರು.