ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಾ.ಬಾಬು ಜಗಜೀವನರಾಮ್​ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಶುಭಕಲ್ಯಾಣ್​, ಜಿ.ಪ್ರಭು, ಬಿ.ವಿ.ಅಶ್ವಿಜಾ, ರಾಜೇಶ್ವರಿ ಇದ್ದರು.  
ಜಿಲ್ಲೆ

ಬಾಬೂಜಿ ಹೋರಾಟ, ವಿಚಾರಧಾರೆ ಎಲ್ಲರಿಗೂ ಪ್ರೇರಣೆ

ಡಿಸಿ ಶುಭಕಲ್ಯಾಣ್​ ಅಭಿಪ್ರಾಯ - ಡಾ.ಬಾಬು ಜಗಜೀವನರಾಮ್​ 118ನೇ ಜಯಂತಿ - ಭಾವಚಿತ್ರಕ್ಕೆ ಪುಷ್ಪನಮನ

ತುಮಕೂರು: ನಗರವಾಸಿಗಳ ಬಹುದಿನ ಬೇಡಿಕೆಯಂತೆ ನಗರದ ಕೋತಿತೋಪು ರಸ್ತೆಯಲ್ಲಿರುವ ಡಾ.ಬಾಬು ಜಗಜೀವನರಾಮ್​ ವೃತ್ತದ ಅಭಿವೃದ್ಧಿಗೆ ಜಿಲ್ಲಾಡಳಿತ ಕಾರ್ಯಕ್ರಮ ರೂಪಿಸಿದ್ದು, ಶ್ರೀದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಡಿಸಿ ಶುಭಕಲ್ಯಾಣ್​ ಭರವಸೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಡಾ.ಬಾಬು ಜಗಜೀವನರಾಮ್​ ಅವರ 118ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಇಂದಿನ ಯುವ ಜನರಿಗೆ ಡಾ.ಬಾಬು ಜಗಜೀವನರಾಮ್​ ಅವರ ಆದರ್ಶಗಳನ್ನು ಪರಿಚಯಿಸುವ ಉದ್ದೇಶದಿಂದ ಅವರ ಹೆಸರಿನಲ್ಲಿ ಸ್ಮಾರಕಗಳು ನಿರ್ಮಾಣವಾಗಬೇಕಿದೆ ಎಂದರು. ನಗರದ ಕೋತಿತೋಪು ಪ್ರದೇಶದಲ್ಲಿ ಡಾ.ಬಾಬು ಜಗಜೀವನರಾಮ್​ ವೃತ್ತ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ. ಬಾಬೂಜಿ ಭವನ ನಿಮಾರ್ಣಕ್ಕೂ ಸರ್ಕಾರದಿಂದ ಉತ್ತಮ ಸ್ಪಂದನೆ ದೊರೆತಿದ್ದು, ಶೀಘ್ರದಲ್ಲಿಯೇ ಭವನ ನಿಮಾರ್ಣಕ್ಕೆ ಶಂಕುಸ್ಥಾಪನೆ ಮಾಡಲು ಜಿಲ್ಲಾಡಳಿತ ಅಣಿಯಾಗುತ್ತಿದೆ ಎಂದರು. ಡಾ.ಬಿ.ಆರ್​.ಅಂಬೇಡ್ಕರ್​, ಡಾ.ಬಾಬು ಜಗಜೀವನರಾಮ್​ ಅವರಂತಹ ಮಹನೀಯರ ಮಾರ್ಗದಲ್ಲಿ ನಾವು ನಡೆಯಬೇಕು. ತಳ ಸಮುದಾಯಗಳಿಗಾಗಿ ಅವರ ಶ್ರಮವನ್ನು ಸ್ಮರಿಸಬೇಕು. ಹಿಂದುಳಿದ, ದಲಿತ, ಮಹಿಳೆಯರು, ಮಕ್ಕಳು, ರೈತ ಸಮುದಾಯ ಅಭಿವೃದ್ಧಿಯಾಗಬೇಕೆಂಬ ಅವರ ಮಹದಾಶೆಯನ್ನು ನಾವೆಲ್ಲ ಒಟ್ಟಾಗಿ ಈಡೇರಿಸುವ ಪ್ರಯತ್ನ ಮಾಡಬೇಕಿದೆ ಎಂದರು. ಬಾಬೂಜಿ ಅವರು ತಮಗೆ ದೊರೆಯದ ಸೌಲಭ್ಯಗಳು ಇತರರಿಗೂ ವಿಶೇಷವಾಗಿ ದಲಿತರು ಹಾಗೂ ಬಡವರಿಗೆ ದೊರಕಿಸಬೇಕೆಂಬ ನಿಟ್ಟಿನಲ್ಲಿ ಹೋರಾಡಿದರು. ಅವರ ಆಡಳಿತಾವಧಿಯಲ್ಲಿ ದೀನ ದಲಿತರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದರು. ಅವರ ಆದರ್ಶಗಳು, ವಿಚಾರಧಾರೆಗಳು ಇಂದಿಗೂ ಪ್ರೇರಣೆಯಾಗಿವೆ ಎಂದರು. ಅಪರ ಜಿಲ್ಲಾಧಿಕಾರಿ ಡಾ.ಎನ್​. ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ತಹಸೀಲ್ದಾರ್​ ರಾಜೇಶ್ವರಿ ಮತ್ತಿತರರು ಇದ್ದರು.

ಕಾರ್ಮಿಕರಿಗೆ ಸಾಲಸೌಲಭ್ಯ

ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಮಾತನಾಡಿ, ಹಿಂದುಳಿದ ವರ್ಗಗಳ ಏಳಿಗೆಯೊಂದಿಗೆ ಕಾರ್ಮಿಕರ ಶ್ರೇಯೋಭಿವೃದ್ಧಿಯೂ ಬಾಬೂಜಿಯವರ ಮೂಲ ಮಂತ್ರವಾಗಿತ್ತು. ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿ, ಕರ್ತವ್ಯದ ಅವಧಿ ನಿಗಧಿ ಬಗ್ಗೆ ಕಾಳಜಿ ಹೊಂದಿದ್ದರು. ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದರು ಎಂದು ತಿಳಿಸಿದರಲ್ಲದೆ, ಪಾಲಿಕೆಯಲ್ಲಿಯೂ ಸಹ ಕಾರ್ಮಿಕರ ಕುಟುಂಬಗಳಿಗೆ ಸಾಲ ಒದಗಿಸುವುದು, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ಅಪಾರ

ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಭಾರತದ ಇತಿಹಾಸದಲ್ಲಿ ಬಾಬೂಜಿ ಅವರು ಕೃಷಿ, ರೈಲ್ವೆ, ಕಾರ್ಮಿಕ, ರಕ್ಷಣಾ, ಸಾರಿಗೆ ಸೇರಿದಂತೆ ವಿವಿಧ ಖಾತೆಗಳ ಕೇಂದ್ರ ಸಚಿವರಾಗಿ, ಉಪ ಪ್ರಧಾನಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ದಾಖಲೆಯನ್ನು ಹೊಂದಿದ್ದಾರೆ. 30 ವರ್ಷಗಳ ಕಾಲ ವಿವಿಧ ಇಲಾಖೆಗಳ ಖಾತೆಗಳನ್ನು ನಿರ್ವಹಿಸಿ ಸಧೃಡ ಆಡಳಿತ ನೀಡಿದ ಧೀಮಂತ ವ್ಯಕ್ತಿಯಾಗಿದ್ದರು ಎಂದು ಸ್ಮರಿಸಿದರು. ದೇಶದಲ್ಲಿ ಬರಗಾಲ ಸಮಯದಲ್ಲಿ ಉದ್ಭವಿಸಿದ್ದ ಆಹಾರದ ಬಿಕ್ಕಟ್ಟನ್ನು ನಿಭಾಯಿಸಿದರು. ಹಸಿರುಕ್ರಾಂತಿ ಮೂಲಕ ಭಾರತದ ಕೃಷಿಯನ್ನು ಆಧುನೀಕರಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ದಲಿತರ ಸಮಾನತೆ ಸಾಧಿಸಲು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಅವರ ನಡೆ ನಮಗೆಲ್ಲ ಆದರ್ಶವಾಗಬೇಕು. ತಳ ಸಮುದಾಯದವರನ್ನು ಮೇಲೆತ್ತುವ ಅವರ ಕಳಕಳಿ ಮೆಚ್ಚುವಂತಹದ್ದು ಎಂದು ಬಣ್ಣಿಸಿದರು. ಮೂಲಭೂತ ಶಿಕ್ಷಣ ವ್ಯವಸ್ಥೆಗೆ ಅವರ ಮೊದಲ ಆದ್ಯತೆಯಾಗಿತ್ತು. ಈ ನಿಟ್ಟಿನಲ್ಲಿ ಮಕ್ಕಳಿಗೆ ಮೂಲಭೂತ ಶಿಕ್ಷಣ ನೀಡಲು ಸರ್ಕಾರದಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳನ್ನು ಹಿಂದಿಕ್ಕಿ ಸರ್ಕಾರಿ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ ಎಂದು ತಿಳಿಸಿದರಲ್ಲದೆ, ಬಾಬೂಜಿ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಸಂಕಲ್ಪ ಮಾಡುವ ಮೂಲಕ ಅವರ ಜಯಂತಿ ಸುದಿನಕ್ಕೆ ಕೊಡುಗೆಯಾಗಿ ನೀಡಬೇಕು ಎಂದರು.