ಹನೂರಿನಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮೊಂಬತ್ತಿ ಬೆಳಗಿಸಿ ನಮನ ಸಲ್ಲಿಸಲಾಯಿತು. ವೈ.ಕೆ ಗುರುಪ್ರಸಾದ್, ಉಮೇಶ್, ಡಾ.ಪ್ರಕಾಶ್, ಶೇಷಣ್ಣ, ಸಿದ್ದರಾಜು ಇತರರು ಇದ್ದರು.  
ಜಿಲ್ಲೆ

ಅಸ್ಪಶ್ಯತೆ ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರ

ಅಭಿನಯ್ ಎಚ್.ಎಂ

ಹನೂರು: ಸಮಾಜದಲ್ಲಿನ ಅಸ್ಪಶ್ಯತೆ ಹಾಗೂ ಅಸಮಾನತೆಯನ್ನು ಹೋಗಲಾಡಿಸುವುದರ ಜತೆಗೆ ರೈತರು ಸ್ವಾವಲಂಬಿಗಳನ್ನಾಗಿಸುವಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಕೊಡುಗೆ ಅಪಾರ ಎಂದು ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಅಭಿಪ್ರಾಯಪಟ್ಟರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಶನಿವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಹಿಂದುಳಿದ ಸಮಾಜದಲ್ಲಿ ಜನಿಸಿದ ಬಾಬೂಜಿ ಅವರ ಕಾಲಘಟ್ಟದಲ್ಲಿ ಅಸ್ಪಶ್ಯತೆ ಹಾಗೂ ಅಸಮಾನತೆ ತಾಂಡವಾಡುತ್ತಿತ್ತು. ಈ ದಿಸೆಯಲ್ಲಿ ಅವರು ಹಿಂದುಳಿದವರ ಬಗ್ಗೆ ವಿಶೇಷ ಕಾಳಜಿ ವಹಿಸಿ ಹೋರಾಟ ನಡೆಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದು ಸ್ಮರಿಸಿದರು.

ಇವರು ಹೋರಾಟಗಾರರಷ್ಟೇ ಅಲ್ಲ ಸಮಾಜ ಸೇವಕರು ಆಗಿದ್ದರು. ಉತ್ತಮ ಕಾರ್ಯ ವೈಖರಿಯಿಂದಲೇ ರಾಜಕೀಯದಲ್ಲಿ ಉನ್ನತ ಸ್ಥಾನವನ್ನು ಪಡೆದರು. ಜತೆಗೆ ನೆಹರು ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು. ಮುರಾರ್ಜಿ ದೇಸಾಯಿ ಆಡಳಿತದಲ್ಲಿ ಉಪ ಪ್ರಧಾನಿಯಾಗಿದ್ದರು. ಕೃಷಿ, ರಕ್ಷಣೆ, ಕೈಗಾರಿಕೆ ಹಾಗೂ ಇತರ ಖಾತೆಯನ್ನು ದಕ್ಷತೆಯಿಂದ ನಿಭಾಯಿಸುವ ಮೂಲಕ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದರು ಎಂದರು.

ದೇಶದಲ್ಲಿ 1974ರಲ್ಲಿ ಬರ ಪರಿಸ್ಥಿತಿ ಎದುರಾದ ವೇಳೆ ಆಹಾರ ಉತ್ಪಾದನೆ ಹೆಚ್ಚಿಸುವುದರ ಜತೆಗೆ ರೈತರನ್ನು ಸ್ವಾವಲಂಬಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಹಸಿರು ಕ್ರಾಂತಿ ಮಡಿದರು. ಆದ್ದರಿಂದ ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಪಂ ಸದಸ್ಯ ಸುದೇಶ್ ಮಾತನಾಡಿ, ಬಾಬೂಜಿ ಅವರು ಬಡ ಕುಟುಂಬದಲ್ಲಿ ಜನಿಸಿದ್ದು, ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ನಾಯಕ. ಅಧಿಕಾರದಲ್ಲಿರುವಾಗಲೇ ಇವರು ನಿಧನರಾದದ್ದು ನಿಜಕ್ಕೂ ನೋವಿನ ಸಂಗತಿ. ಆದರೆ ಇವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಉತ್ತಮ ಸಮಾಜಕ್ಕೆ ಇಂದಿಗೂ ಸ್ಫೂರ್ತಿದಾಯಕ ಎಂದರು.

ಪಪಂ ಸದಸ್ಯರಾದ ಸಂಪತ್‌ಕುಮಾರ್, ಮಹೇಶ್, ತಾಪಂ ಇಒ ಉಮೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಶಿರಸ್ತೆದಾರ್ ನಾಗೇಂದ್ರ, ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಕಂದವೇಲು, ಗ್ರಾಮ ಆಡಳಿತ ಅಧಿಕಾರಿ ಶೇಷಣ್ಣ, ನೌಕರ ಸಿದ್ದರಾಜು, ಮುಖಂಡರಾದ ಗುರುಸ್ವಾಮಿ, ರಾಜು ಇತರರು ಇದ್ದರು.