ಜಿಲ್ಲೆ

ಪ್ರಗತಿಗೆ ಹೊಸ ಭಾಷ್ಯ ಬರೆದ ಬಾಬೂಜಿ

ವಸಂತಕುಮಾರ್ ಬಿ

ಹನಗೋಡು: ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾ ನಂತರದ ಭಾರತದ ರಾಜಕಾರಣದಲ್ಲಿ ತನ್ನ ಅಪ್ರತಿಮ ರಾಜಕೀಯ ಚಿಂತನೆ ಹಾಗೂ ಅಭಿವೃದ್ಧಿಪರ ಯೋಜನೆಗಳ ಮೂಲಕ ಕ್ರಾಂತಿಕಾರಕ ಪ್ರಗತಿಗೆ ಹೊಸ ಭಾಷ್ಯ ಬರೆದ ಡಾ.ಜಗಜೀವನರಾಮ್ ಅಭಿವೃದ್ಧಿ ಪರ ಚಿಂತನೆಯ ಅದ್ವಿತೀಯ ನಾಯಕ ಎಂದು ಶಿಕ್ಷಕ ಹಾಗೂ ಸಾಹಿತಿ ಜೆ.ಮಹಾದೇವ್ ಕಲ್ಕುಣಿಕೆ ಬಣ್ಣಿಸಿದರು.

ಹನಗೋಡು ಹೋಬಳಿಯ ಕೊತ್ತೇಗಾಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿ, ದೇಶದ ರಾಜಕಾರಣದ ಅರ್ಧ ದಶಕಕ್ಕೂ ಮೀರಿದ ಅವಧಿಯಲ್ಲಿ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಸಾಧನೆ ಚಾರಿತ್ರಿಕ ದಾಖಲೆಯಾಗಿದೆ. ಕಾರ್ಮಿಕ, ಸಾರಿಗೆ ಸಂಪರ್ಕ, ಗೃಹ, ರೈಲ್ವೆ,ಕೃಷಿ ಹಾಗೂ ನೀರಾವರಿ ಖಾತೆಗಳ ಸಚಿವರಾಗಿ ಎಲ್ಲಕ್ಕೂ ಮಿಗಿಲಾಗಿ ರಾಷ್ಟ್ರದ ಉಪಪ್ರಧಾನಿಯಾಗಿ ಸಾಧಿಸಿದ ಕ್ರಾಂತಿಕಾರಕ ಸಾಧನೆಗಳು ಅವರೊಬ್ಬ ಅಪ್ರತಿಮ ರಾಜಕೀಯ ಮುತ್ಸದ್ದಿ ಹಾಗೂ ದೂರದೃಷ್ಟಿಯ ನಾಯಕರಾಗಿದ್ದರು ಎಂಬುದಕ್ಕೆ ಪುರಾವೆಗಳಾಗಿದ್ದವು ಎಂದರು.

ಕೇಂದ್ರ ಕೃಷಿ ಸಚಿವರಾಗಿ ದೇಶದ ಆಹಾರ ಸಮಸ್ಯೆಗೆ ಪರಿಹಾರ ರೂಪಿಸಿ ದೇಶವು ಆಹಾರ ಸ್ವಾವಲಂಬನೆ ಸಾಧಿಸುವಲ್ಲಿ ಅವರ ಅಭಿವೃದ್ಧಿಪರ ರಾಜಕೀಯ ಚಿಂತನೆ ಹಾಗೂ ಕಾರ್ಯ ವೈಖರಿಗಳೇ ಸಾಕ್ಷಿ ಎಂದು ವಿಶ್ಲೇಷಿಸಿದರು.

ಮುಖ್ಯಶಿಕ್ಷಕ ಎಂ.ಪಿ.ಯೋಗರಾಜು ಮಾತನಾಡಿ, ಡಾ.ಬಾಬು ಜಗಜೀವನರಾಮ್ ಭಾರತದ ಸಮಕಾಲೀನ ರಾಜಕಾರಣದಲ್ಲಿ ರಾಷ್ಟ್ರದ ಪ್ರಗತಿ ಪುರುಷರಾಗಿ ಗೋಚರಿಸುತ್ತಾರೆ. ಅವರಲ್ಲಿದ್ದ ಅಭಿವೃದ್ಧಿಪರ ಚಿಂತನೆಗಳು ಹಾಗೂ ದೇಶದ ಸಮಗ್ರ ಪ್ರಗತಿ ಕುರಿತ ತಲಸ್ಪರ್ಶಿ

ವಿಚಾರಧಾರೆಗಳು ದೇಶವನ್ನು ಅಭಿವೃದ್ಧಿಯ ಮುಂಚೂಣಿ ನೆಲೆಗೆ ತರುವಲ್ಲಿ ಸಫಲವಾಗಿದ್ದವು ಎಂದು ತಿಳಿಸಿದರು.

ಸಮಾರಂಭದಲ್ಲಿ ಶಿಕ್ಷಕರಾದ ಎಂ.ಎಲ್.ಸಂಪತ್ ಕುಮಾರಿ, ಮಹೇಶ್ ಕುಮಾರ್, ಕೆ.ಕೆ.ಯೋಗೇಶ್ವರ್, ಕೆ.ವಿ.ಸೌಭಾಗ್ಯ, ಶಿವಣ್ಣ, ಆರ್.ಎಲ್.ರಾಮಕೃಷ್ಣ, ಕೃಷ್ಣನಾಯಕ ಹಾಗೂ ಪ್ರಕಾಶ್ ಕಟ್ಟಿ ಹಾಜರಿದ್ದರು.