ಎಚ್.ಡಿ.ಕೋಟೆ: ಡಾ.ಬಾಬು ಜಗಜೀವನ್ ರಾಮ್ ಅವರು ಒಬ್ಬ ರಾಜಕಾರಣಿಯೂ ಹೌದು, ಒಬ್ಬ ಸ್ವಾತಂತ್ರ ಹೋರಾಟಗಾರರು ಕೂಡ ಹೌದು ಎಂದು ತಹಸೀಲ್ದಾರ್ ಶ್ರೀನಿವಾಸ್ ಎಂದು ಬಣ್ಣಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನ್ ರಾಮ್ ಅವರ 38ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವತಂತ್ರ ಪೂರ್ವದಲ್ಲಿ ಬಾಬು ಜಗಜೀವನ್ ರಾಮ್ ಅವರು ಮಹಾತ್ಮ ಗಾಂಧೀಜಿ ಅವರ ಜತೆಯಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರಕ್ಕಾಗಿ ಹೋರಾಟದಲ್ಲಿ ಭಾಗಿಯಾಗಿದ್ದರು ಎಂದರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಬಾಬು ಜಗಜೀವನ್ ರಾಮ್ ನಿರ್ವಹಣೆ ಮಾಡದೆ ಇರುವ ಖಾತೆ ಇಲ್ಲ. ಕೇಂದ್ರ ಸರ್ಕಾರದಲ್ಲಿ ಎಲ್ಲ ಖಾತೆಗಳ ಆಡಳಿತವನ್ನು ಸಮರ್ಥವಾಗಿ ನಿಭಾಯಿಸಿದ ರಾಜಕಾರಣಿ. ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಂವಿಧಾನ ನೀಡಿದರೆ ಅದನ್ನು ಜಾರಿಗೆ ತರುವಂತಹ ಕೆಲಸವನ್ನು ಬಾಬು ಜಗಜೀವನ್ ರಾಮ್ ಮಾಡಿದರು ಎಂದರು.
ಮೊದಲ ಕೇಂದ್ರ ಕಾರ್ಮಿಕ ಮಂತ್ರಿಯಾಗಿ ಆಧುನಿಕವಾಗಿ ದೇಶಕ್ಕೆ ಏನು ಕೊಡುಗೆ ನೀಡಬೇಕು ಎಂಬುದನ್ನು ತಿಳಿಸಿದರು.
ಭಾರತ ಮತ್ತು ಪಾಕಿಸ್ತಾನಕ್ಕೆ ಯುದ್ಧ ಆದ ಸಂದರ್ಭದಲ್ಲಿ ಬಾಬೂಜೀ ಅವರು ರಕ್ಷಣಾ ಮಂತ್ರಿಯಾಗಿ ಸಮರ್ಥವಾಗಿ ಆಡಳಿತ ನಡೆಸಿದರು. ದೇಶದಲ್ಲಿ ಬರಗಾಲ ಇದ್ದ ಸಂದರ್ಭದಲ್ಲಿ ಕೇಂದ್ರ ಆಹಾರ ಮಂತ್ರಿಯಾಗಿ ಆಹಾರ ಸಮಸ್ಯೆಯನ್ನು ನೀಗಿಸಿ ಹಸಿರು ಕ್ರಾಂತಿ ಹರಿಕಾರಕ್ಕೆ ಹೆಸರು ವಾಸಿಯಾದರು ಎಂದು ಸ್ಮರಿಸಿದರು.
ಬಾಬೂಜಿ ಅವರ ಆಡಳಿತದ ಅವಧಿಯಲ್ಲಿ ನಡೆದ ಅಭಿವೃದ್ಧಿ ನೋಟವನ್ನು ಮತ್ತೊಮ್ಮೆ ದೇಶ ನೋಡುವಂತೆ ಆಗಲಿ. ಅವರ ಚಿಂತನೆಗಳನ್ನು ದೇಶದ ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಪ್ರತಿಯೊಬ್ಬರೂ ದ್ವೇಷ ಭಾವ ಇಲ್ಲದೆ ದೇಶದ ಸಮಾನತೆಗೆ ಕೈ ಜೋಡಿಸೋಣ ಎಂದು ತಿಳಿಸಿದರು.
ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ಕೊತ್ತೇಗಾಲ ತಿಮ್ಮಯ್ಯ ಮಾತನಾಡಿ, ಬಾಬೂಜೀ ಅವರ ಆದರ್ಶಗಳನ್ನು ದೇಶದ ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಅವರ ದಾರಿಯಲ್ಲಿ ಸಾಗೋಣ ಎಂದರು.
ಕಾರ್ಯಕ್ರಮದಲ್ಲಿ ಇಒ ಧರಣೀಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಸ್ವಾಮಿ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಿ.ಆರ್.ಮಹೇಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಚಿಕ್ಕವೀರನಾಯಕ, ಮುಖಂಡರಾದ ಕೃಷ್ಣಪುರ ಪರಶಿವಮೂರ್ತಿ, ನಾಗರಾಜು, ಜವರಯ್ಯ, ಬಸವರಾಜು, ದೇವರಾಜು, ಪ್ರಕಾಶ್, ಶಿವಯ್ಯ, ಮಹಾಲಿಂಗಯ್ಯ, ಶಿವರಾಜು, ಪುಟ್ಟಮಾದು, ಸೋಮು ಪಟೇಲ್, ಬೆಟ್ಟ ಸ್ವಾಮಿ ಇದ್ದರು.