ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ಎಲ್ಲರ ಸಹಕಾರದೊಂದಿಗೆ ಏ.5ರಂದು ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಹಾಗೂ ಏ.14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಹಮ್ಮಿಕೊಳ್ಳಲು ತಿರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪ್ರತಿನಿಧಿಗಳ ಸಮ್ಮುಖದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಬಾಬೂಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ ಆಚರಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ನಿಧರ್ರಿಸಲಾಯಿತು.
ಸಂಘಟಣೆಗಳ ಮುಖಂಡರು ಮಾತನಾಡಿ, ವಿಚಾರ ಸಂಕಿರಣ, ಕಾರ್ಯಕ್ರಮದಂದು ಮುಖ್ಯ ಭಾಷಣಕ್ಕಾಗಿ ಮಹನೀಯರ ವಿಚಾರಧಾರೆಗಳನ್ನು ಆಳವಾಗಿ ಅಧ್ಯಯನ ಮಾಡಿರುವವರನ್ನು ಆಹ್ವಾನಿಸಬೇಕು. ಡಾ.ಬಿಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರದ ಮೆರವಣಿಗೆಯು ಅದ್ದೂರಿಯಾಗಿ ನಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಜಯಂತಿಯನ್ನು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಅದ್ದೂರಿ ವೇದಿಕೆ ನಿರ್ಮಿಸಿ ಕಾರ್ಯಕ್ರಮ ನಡೆಸಲಾಗುವುದು. ಮೆರವಣಿಗೆಗೆ ಮೆರುಗು ತರಲು ಹೆಚ್ಚಿನ ಕಲಾ ತಂಡಗಳನ್ನು ನಿಯೋಜನೆ ಮಾಡಲಾಗುವುದು. ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮುತುವರ್ಜಿಯಿಂದ ಕಾರ್ಯಕ್ರಮ ಯಶಸ್ವಿಗೆ ಕ್ರಮ ವಹಿಸಲು ತಿಳಿಸಲಾಗಿದೆ. ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಇಬ್ಬರು ಮಹನೀಯರ ಜಯಂತಿ ಕಾರ್ಯಕ್ರಮ ಏರ್ಪಾಡು ಮಾಡಲಾಗುವುದು ಎಂದು ಹೇಳಿದರು.
ಜಿಪಂ ಸಿಇಒ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮುನಿರಾಜು, ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಸಿ.ಎಂ.ನರಸಿಂಹಮೂರ್ತಿ, ಕೆ.ಎಂ.ನಾಗರಾಜು, ಶಿವಮೂರ್ತಿ, ನಾಗರಾಜು, ನಾಗಯ್ಯ, ಯರಿಯೂರು ರಾಜಣ್ಣ, ಚಾ.ಗು.ನಾಗರಾಜು, ಜವರಯ್ಯ, ರಾಮಸಮುದ್ರ ಸುರೇಶ್, ಸಿ.ಎಂ.ಶಿವಣ್ಣ, ಪಿ.ಸಂಘಸೇನ, ಬಸವನಪುರ ರಾಜಶೇಖರ್, ಬ್ಯಾಡಮೂಡ್ಲು ಬಸವಣ್ಣ, ನಾರಾಯಣ್, ಕಂದಹಳ್ಳಿ ನಾರಾಯಣ, ನಾಗೇಶ್, ಆರೂರು ನಾಗೇಂದ್ರ, ಶಿವಕುಮಾರ್, ಮುರುಗೇಶ್, ಪರಶಿವಮೂರ್ತಿ, ಸಿದ್ದಪ್ಪಾಜಿ, ಡಿ. ಸ್ವಾಮಿ ಇತರರು ಇದ್ದರು.