ಮಾನಸಗಂಗೋತ್ರಿಯ ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಗಾಂಧಿ ಪ್ರಪಂಚ ಮತ್ತು ಬಾಬೂಜಿ ಚಿಂತನೆ ವಿಚಾರ ಸಂಕಿರಣವನ್ನು ಸಾಮಾಜಿಕ ಕಾರ್ಯಕರ್ತ ಸಂತೋಷ್ ಕೌಲಗಿ ಉದ್ಘಾಟಿಸಿದರು. ಡಾ.ವೂಡೇ ಪಿ.ಕೃಷ್ಣ, ಪ್ರೊ.ಪದ್ಮಶೇಖರ್, ಡಾ.ಎಂ.ಶ್ರೀನಿವಾಸ ಮೂರ್ತಿ ಹಾಗೂ ಇತರರು ಇದ್ದರು. 
ಜಿಲ್ಲೆ

ಬಾಬು ಜಗಜೀವನ್ ರಾಮ್ ನಿರ್ಧಾರ ದೇಶದ ಚರಿತ್ರೆಯನ್ನೇ ಬದಲಾಯಿಸಿತು

ಮೈಸೂರು: ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದನ್ನು ವಿರೋಧಿಸಿ ಬಾಬು ಜಗಜೀವನ್ ರಾಮ್ ಕಾಂಗ್ರೆಸ್ ತೊರೆದ ನಿರ್ಧಾರ ದೇಶದ ಚರಿತ್ರೆಯನ್ನೇ ಬದಲಾಯಿಸಿತು ಎಂದು ಸಾಮಾಜಿಕ ಕಾರ್ಯಕರ್ತ ಸಂತೋಷ್ ಕೌಲಗಿ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಬಾಬು ಜಗಜೀವನ್ ರಾಮ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗಾಂಧಿ ಪ್ರಪಂಚ ಮತ್ತು ಬಾಬೂಜಿ ಚಿಂತನೆ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಬಾಬು ಜಗಜೀವನ್ ರಾಮ್ ಅವರು ಗಾಂಧಿ ಕುಟುಂಬದೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ಜವಾಹರಲಾಲ್ ನೆಹರು ಅವರ ಸಂಪುಟದಿಂದ ಇಂದಿರಾ ಗಾಂಧಿ ಅವರ ಸಂಪುಟದವರೆಗೆ ವಿವಿಧ ಸಚಿವ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದರು. ಆದರೂ, ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ತೊರೆಯುವ ಧೈರ್ಯ ತೋರಿದರು. ಈ ಕಾರಣಕ್ಕೆ ಅವರು ನಮಗೆ ಇಷ್ಟವಾಗುತ್ತಾರೆ ಎಂದು ಹೇಳಿದರು.

ಗಾಂಧೀಜಿ ಅವರನ್ನು ಎಷ್ಟು ಟೀಕಿಸಬೇಕೋ ಅಷ್ಟು ಟೀಕಿಸಲಾಗಿದೆ; ಎಷ್ಟು ಹೊಗಳಬೇಕೋ ಅಷ್ಟು ಹೊಗಳಲಾಗಿದೆ. ಆದರೆ, ಗಾಂಧೀಜಿಯನ್ನು ಕೇವಲ ಬೌದ್ಧಿಕ ದೃಷ್ಟಿಕೋನದಿಂದ ವಿಶ್ಲೇಷಿಸುವುದರಿಂದ ಅವರ ಚಿಂತನೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊ ಳ್ಳಲು ಸಾಧ್ಯವಿಲ್ಲ. ಅವರನ್ನು ತಲೆಯಿಂದ ಆಲೋಚಿಸುವ ಬದಲು ಹೃದಯದಿಂದ ಅರ್ಥಮಾಡಿಕೊಳ್ಳಬೇಕು. ಅವರ ವಿಚಾರಗಳನ್ನು ಹೃದಯದಿಂದ ಗ್ರಹಿಸಿದಾಗ ಮಾತ್ರ ಅವರ ವ್ಯಕ್ತಿತ್ವದ ನಿಜವಾದ ಅರ್ಥ ತಿಳಿಯುತ್ತದೆ ಎಂದರು.

ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನೇಕ ಕಾನೂನುಗಳನ್ನು ರೂಪಿಸಲಾಗಿದೆ. ಆದರೆ, ಸಮಾಜದಲ್ಲಿ ನಿಜವಾದ ಬದಲಾವಣೆ ತರಲು ಮನಸ್ಸುಗಳ ಪರಿವರ್ತನೆಯಾಗಬೇಕು. ಮಾನಸಿಕ ಬದಲಾವಣೆಯಾಗದೆ ದೇಶದಲ್ಲಿ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ತಜ್ಞ ನಾಡೋಜ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಅನ್ಯಾಯವನ್ನು ವಿರೋಧಿಸುವುದೇ ಗಾಂಧೀಜಿ ಅವರ ಚಿಂತನೆಯ ಮೂಲ ಆಶಯವಾಗಿದೆ. ಗಾಂಧೀಜಿ ಶೋಷಿತ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದ್ದರು. ಇಂದು ಸ್ವಾತಂತ್ರೃವನ್ನು ರಕ್ಷಿಸುವ ತುರ್ತು ಅಗತ್ಯವಿದ್ದು, ಸತ್ಯ, ಅಹಿಂಸೆ ಮತ್ತು ತ್ಯಾಗದ ಮೂಲಕ ಸ್ವಾತಂತ್ರೃ ಹೋರಾಟಗಾರರು ಕಂಡ ಕನಸನ್ನು ನನಸಾಗಿಸಬೇಕಿದೆ ಎಂದರು.

ಗಾಂಧೀಜಿ ಮೂಲಭೂತವಾದ, ಕೋಮುವಾದ ಮತ್ತು ಹಿಂಸೆಯ ವಿರುದ್ಧ ಹೋರಾಡಿ ಸಾಮಾಜಿಕ ಸುಧಾರಣೆಗೆ ಒತ್ತು ನೀಡಿದ್ದರು. ಜನರ ಹೃದಯ ಪರಿವರ್ತನೆಯಾಗಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ, ಇಂದಿನ ರಾಜಕೀಯದಲ್ಲಿ ರಾಷ್ಟ್ರೀಯ ಹಿತಾಸಕ್ತಿಗಿಂತ ಅಧಿಕಾರದ ಆಸೆಯೇ ಹೆಚ್ಚಾಗಿದೆ. ಸಮಾಜದಲ್ಲಿ ಜನರ ಮನಸ್ಸುಗಳನ್ನು ಒಡೆಯುವ ಶಕ್ತಿಗಳು ಬಲಗೊಳ್ಳುತ್ತಿದ್ದು, ಜಾತೀಯತೆ ಮತ್ತು ಅಸ್ಪೃಶ್ಯತೆ ಇನ್ನೂ ಮುಂದುವರಿದಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಜಾತಿ ತಾರತಮ್ಯದ ಮನೋಭಾವ ಜೀವಂತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪದ್ಮಶೇಖರ್, ಮೈಸೂರು ವಿಶ್ವವಿದ್ಯಾಲಯದ ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಎಂ.ಶ್ರೀನಿವಾಸ ಮೂರ್ತಿ ಹಾಗೂ ಬಾಬು ಜಗಜೀವನ್ ರಾಮ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ಡಿ.ಪಿ.ಶಿವಪ್ರಸಾದ, ಸಹಾಯಕ ಪ್ರಾಧ್ಯಾಪಕಿ ಪವಿತ್ರಾ ಇದ್ದರು.