ಜಿಲ್ಲೆ

ಅಸ್ಪಶ್ಯತೆಯ ನೋವಿನ ನಡುವೆಯೇ ನಾಯಕರಾದ ಬಾಬೂಜಿ

Mysuru

ಅಸ್ಪಶ್ಯತೆಯ ನೋವನ್ನು ಅನುಭವಿಸಿ ಶೋಷಿತ ವ್ಯವಸ್ಥೆಯಲ್ಲೇ ದೊಡ್ಡ ಸಾಧನೆ ತೋರಿದ ಮಹಾನ್ ನಾಯಕ ಡಾ. ಬಾಬು ಜಗಜೀವನರಾಮ್ ಎಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಬಣ್ಣಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಮಾತ ನಾಡಿ, ಮೀಸಲಾತಿ ವ್ಯವಸ್ಥೆ ಜಾರಿಗೆ ತರುವ ಸಂದರ್ಭ ಡಾ.ಬಾಬು ಜಗಜೀವನ ರಾಮ್ ಹಲವು ಅಮೂಲ್ಯ ಸಲಹೆಗಳನ್ನು ನೀಡಿ ಶೋಷಿತರ ಪರ ಧ್ವನಿಯಾದರು.

ದೇಶದ ಜನರ ಹಸಿವು ನೀಗಿಸಿದರು

ದೇಶಕ್ಕೆ ಸ್ವಾತಂತ್ರೃ ದೊರೆತ ಸಂದರ್ಭ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದಿರಲಿಲ್ಲ. ಇದನ್ನು ಮನಗಂಡ ಡಾ. ಬಾಬುಜಗಜೀವನ ರಾಮ್ ದೇಶದಲ್ಲಿ ಹಸಿರುಕ್ರಾಂತಿ ಮಾಡಿ ದೇಶದ ಜನರ ಹಸಿವು ನೀಗಿಸಿದರು. ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕರ ಅನುಕೂಲಕೋಸ್ಕರ ಹಲವು ಕಾಯ್ದೆಗಳನ್ನು ರೂಪಿಸಿದರು. ಅವರು ದೇಶಕ್ಕೆ ನೀಡಿರುವ ಕೊಡುಗೆಗಳನ್ನು ನಾವೆಲ್ಲ ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.

ರಾಜಕೀಯದಲ್ಲಿ ಧರ್ಮ ಬಳಕೆ ಅಪಾಯಕಾರಿ

ರಂಗಕರ್ಮಿ ಬಸವಲಿಂಗಯ್ಯ ಮಾತನಾಡಿ, ಬಿಜೆಪಿಯವರು ಧರ್ಮವನ್ನು ರಾಜಕೀಯದಲ್ಲಿ ಬೆರೆಸಿ ಧರ್ಮ, ಜಾತಿಗಳ ನಡುವೆ ವಿಷಬೀಜ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಸರ್ಕಾರ ಬದಲಾಗದೆ ಇದ್ದರೆ ಸರ್ಕಾರದ ಯಾವುದೇ ಸಂಸ್ಥೆಗಳು ಉಳಿಯುವ ಸಾಧ್ಯತೆ ಇಲ್ಲ. ಅದಕ್ಕೆ ರಂಗಾಯಣ ಒಂದು ಉದಾಹರಣೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ ಕುಮಾರ್, ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ವಾಸು ಹಾಗೂ ಇತರರು ಇದ್ದರು.