ಜಿಲ್ಲೆ

ಹಸಿರುಕ್ರಾಂತಿಯ ಹರಿಕಾರನನ್ನು ಸ್ಮರಿಸಿದ ಮೈಸೂರು

Mysuru

ಹಸಿರುಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ಅವರ ಆದರ್ಶಗಳನ್ನು ಅನುಷ್ಠಾನಕ್ಕೆ ತರಬೇಕು. ನಮ್ಮ ನಡೆ, ನುಡಿಯಲ್ಲಿ ಅವರನ್ನು ಅನುಸರಿಸಿದರೆ ಮಾತ್ರ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಮೈಸೂರು ವಿಶ್ವ ವಿದ್ಯಾಲಯದ ಕುಲಸಚಿವೆ ವಿ.ಆರ್. ಶೈಲಜಾ ಹೇಳಿದರು.

ಮೈಸೂರು ವಿಶ್ವ ವಿದ್ಯಾಲಯದ ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ವಿಶೇಷ ಘಟಕ ವತಿಯಿಂದ ಕೇಂದ್ರದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಹಲವು ಬದಲಾವಣೆ ತಂದರು

ನಾವಿಂದು ಸಾಮಾಜಿಕ ನ್ಯಾಯ, ಸಬಲೀಕರಣದ ಬಗ್ಗೆ ಮಾತನಾಡುತ್ತೇವೆ. ಆದರೆ ಇದೆಲ್ಲವೂ ಇಲ್ಲದ ಸಂದರ್ಭದಲ್ಲಿಯೇ ನಾಯಕರಾಗಿ ರೂಪುಗೊಂಡವರು ಡಾ.ಬಾಬು ಜಗಜೀವನ ರಾಮ್. ಅವರು ಸಮಾಜದಲ್ಲಿ ತಂದಿರುವ ಬದಲಾವಣೆಗಳು ಅಪಾರ. ಈ ಹಿಂದೆ ಭಾರತ ಗೋದಿ ನುಚ್ಚಿಗೆ ಅಮೆರಿಕದ ಬಳಿಕ ಕೈಯೊಡ್ಡುವ ಕಾಲ ಇತ್ತು. ಆದರೆ ಬಾಬು ಜಗಜೀವನ ರಾಮ್ ಕೈಗೊಂಡ ಹಸಿರುಕ್ರಾಂತಿಯಿಂದ ಆಹಾರ ಉತ್ಪಾದನೆ ಪ್ರಮಾಣ ಹೆಚ್ಚಾಯಿತು. ಇಂದು ದೇಶದಲ್ಲಿ ಪೌಷ್ಟಿಕಾಂಶದ ಕೊರತೆ ಇದೆ, ಆದರೆ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಕಡಿಮೆ. ಇದಕ್ಕೆ ಪ್ರಮುಖ ಕಾರಣ ಬಾಬು ಜಗಜೀವನ ರಾಮ್ ಎಂದರು.

15 ಕೃತಿಗಳ ಬಿಡುಗಡೆ

ಕೇಂದ್ರದ ನಿರ್ದೇಶಕ ಪ್ರೊ. ಆರ್. ತಿಮ್ಮರಾಯಪ್ಪ ಮಾತನಾಡಿ, ಕೇಂದ್ರದ ವತಿಯಿಂದ 15 ಕೃತಿಗಳನ್ನು ಹೊರತಂದಿದ್ದೇವೆ. 5 ಪುಸ್ತಕಗಳು ಪ್ರಕಟಣೆ ಹಂತದಲ್ಲಿ ಇದೆ. ಬಾಬು ಜಗಜೀವನ ರಾಮ್ ಪತ್ನಿ ಇಂದ್ರಾಣಿ ಅವರು ಬಾಬೂಜಿ ಕುರಿತು ರಚಿಸಿರುವ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದೇವೆ ಎಂದರು.

ಸಾಕಷ್ಟು ಜನರಿಗೆ ಬಾಬು ಜಗಜೀವನ ರಾಮ್ ಅವರು ಕೈಗೊಂಡ ಹಸಿರು ಕ್ರಾಂತಿಯ ಕುರಿತು ಮಾತ್ರ ತಿಳಿದಿದೆ. ಆದರೆ, ಅವರು ಕಾರ್ಮಿಕ ಸಚಿವರಾಗಿ ಕಾರ್ಮಿಕರ ಅನುಕೂಲಕೋಸ್ಕರ ಹಲವಾರು ಕಾಯ್ದೆಗಳನ್ನು ರೂಪಿಸಿದರು. ಅಲ್ಲದೆ ಅವರು ನೀಡಿದ ಸಲಹೆಗಳನ್ನು ವಿಶ್ವದ ನಾನಾ ದೇಶಗಳು ಸ್ವೀಕಾರ ಮಾಡಿವೆ ಎಂದು ಹೇಳಿದರು.

ವೇದಿಕೆಯಲ್ಲಿ ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ವಿಷಯ ತಜ್ಞ ಎನ್.ಸಿ. ಮುನಿಯಪ್ಪ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗ ವಿಶೇಷ ಘಟಕದ ವಿಶೇಷ ಅಧಿಕಾರಿ ಪ್ರೊ.ಎಸ್. ಮಹದೇವಮೂರ್ತಿ ಹಾಗೂ ಇತರರು ಇದ್ದರು.