ಉಡುಪಿ: ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ ಹೋರಾಟ ಹಾಗೂ ಜೀವನದ ಮೌಲ್ಯಗಳು ಪ್ರತಿಯೊಬ್ಬರಿಗೂ ಆದರ್ಶವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಹಾನ್ ವ್ಯಕ್ತಿಗೆ ಗೌರವ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಂ ಅವರ 117ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಮಕಾಲೀನರಾಗಿದ್ದ ಡಾ.ಬಾಬು ಅವರು ಕೇಂದ್ರದಲ್ಲಿ ಬಹುತೇಕ ಎಲ್ಲ ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಾರ್ಮಿಕರ ಅಭಿವೃದ್ಧಿಗೆ ಅನೇಕ ಸುಧಾರಣಾ ಕ್ರಮವನ್ನು ಅಳವಡಿಸಿದ್ದರು. ಭಾರತದಲ್ಲಿ ಆಹಾರದ ಕೊರತೆ ಉಂಟಾದ ಸಂದರ್ಭ ಸುಧಾರಿತ ತಳಿಗಳು, ರಸಗೊಬ್ಬರ ಬಳಸಿಕೊಳ್ಳುವುದರ ಮೂಲಕ ಆಹಾರಉತ್ಪಾದನೆ ಹೆಚ್ಚಿಸಿದ್ದರು. ಹಸಿರು ಕ್ರಾಂತಿಗೆ ಕೊಡುಗೆ ನೀಡಿದ ಅವರು ನಿತ್ಯಸ್ಮರಣೀಯರು ಎಂದರು.
ಮರೆಯಲಾರದ ವ್ಯಕ್ತಿತ್ವ:
ಜಿಪಂ ಸಿಇಒ ಪ್ರತಿಕ್ ಬಾಯಲ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಂದಿಗೂ ಮರೆಯಲಾರದ ವ್ಯಕ್ತಿತ್ವ ಬಾಬು ಜಗಜೀವನರಾಂ ಅವರದ್ದು. ಸಮ ಸಮಾಜ ನಿಮಾರ್ಣದ ಕನಸು ಕಂಡಿದ್ದ ಅವರು, ಎಲ್ಲ ವರ್ಗದ ಜನಾಂಗದ ನಡುವೆ ಸಮಾನತೆ ತರಲು ಶ್ರಮಿಸಿದ್ದರು ಎಂದರು.
ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಎಎಸ್ಪಿ ಸಿದ್ಧಲಿಂಗಪ್ಪ ಟಿ., ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅನಿತಾ ಮಡ್ಲೂರು ಕಾರ್ಯಕ್ರಮ ನಿರೂಪಿಸಿದರು.