ರಾಮನಗರ : ಬಡವರು, ಶೋಷಿತರು, ದಲಿತರ ಪರ ಹೋರಾಟ ಮಾಡಿದ ಮಹಾನ್ ನಾಯಕ ಡಾ. ಬಾಬು ಜಗಜೀವನ ರಾಮ್. ಅವರು ವಿಶ್ವಮಾನವರ ಸಾಲಿಗೆ ಸೇರಿದವರಾಗಿದ್ದಾರೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅಭಿಪ್ರಾಯಪಟ್ಟರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನ ರಾಮ್ ಅವರ 118ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸಮಾನತೆ ತರಲು, ಶೋಷಿತರನ್ನು ಮುಖ್ಯವಾಹಿನಿಗೆ ಕರೆತರಲು ಹೋರಾಟ ಮಾಡಿದ ಡಾ. ಬಾಬು ಜಗಜೀವನ ರಾಮ್ ಅವರು ದೇಶದ ಸ್ವಾತಂತ್ರ್ಯ ತಂದುಕೊಡಲು ಮಹಾತ್ಮ ಗಾಂಧೀಜಿ ಅವರ ಜತೆಗೂಡಿದವರಾಗಿದ್ದಾರೆ. ದೇಶದ ಮೊಟ್ಟ ಮೊದಲ ಉಪಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರು ದೇಶದ ರಕ್ಷಣಾ ಸಚಿವರಾಗಿ ಅದರಲ್ಲೂ ಕೃಷಿ ಸಚಿವರಾಗಿ ಮಾಡಿದ ಕ್ರಾಂತಿಗೆ ಹಸಿರು ಕ್ರಾಂತಿಯ ಹರಿಕಾರಕ ಎಂದು ಜನಜರಿತರಾಗಿದ್ದಾರೆ ಎಂದರು.
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ರೂಪುಗೊಳ್ಳಲು ಕಾರಣೀಭೂತರಾದ ಇಂತಹ ವ್ಯಕ್ತಿಗಳ ಆದರ್ಶ ಅನುಕರಣೀಯ. ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಲಿಗೆ ಸೇರಿದ ಡಾ. ಬಾಬು ಜಗಜೀವನ್ ರಾಮ್ ಅವರು ಒಂದು ಸಮುದಾಯ, ಒಂದು ದೇಶಕ್ಕೆ ಸೇರಿದವರಲ್ಲ. ಅವರು ವಿಶ್ವ ಮಾನವರು, ಶಿಕ್ಷಣ ಹಾಗೂ ಶಿಸ್ತಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದ ಇವರ ಸಾಧನೆ ಇಂದಿನ ಯುವ ಜನಾಂಗಕ್ಕೆ ಆದರ್ಶ ಎಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಎಎಸ್‌ಪಿ ರಾಮಚಂದ್ರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸತೀಶ್, ಮುಖಂಡರಾದ ನರಸಿಂಹಮೂರ್ತಿ, ಶಿವಶಂಕರ್, ಶಿವ ಪ್ರಕಾಶ್, ರಮೇಶ್, ಗುರುಮೂರ್ತಿ ಇತರರು ಇದ್ದರು.