ಜಿಲ್ಲೆ

ಕೋರ್ಟ್ ತೀರ್ಪಿಂದ ಕಳಂಕ ದೂರ

ಮಂಗಳೂರು/ಉಡುಪಿ/ವಿಟ್ಲ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಸ್ವಾಮೀಜಿಗಳು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಸ್ವಾಗತಿಸಿವೆ.

ರಾಮ ಜನ್ಮ ಭೂಮಿ ಆಂದೋಲನ ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಇನ್ನು ಭವ್ಯ ರಾಮಮಂದಿರ ನಿರ್ಮಾಣವಾಗಿ ಶ್ರೀರಾಮನ ಆಶೀರ್ವಾದ ರಾಷ್ಟ್ರದ ಜನತೆ ಮೇಲಿರಲಿ. ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿ ಸಮಾಜದಲ್ಲಿ ತಪ್ಪು ಕಲ್ಪನೆ ಇತ್ತು, ಅದನ್ನು ಘನ ನ್ಯಾಯಾಲಯದ ತೀರ್ಪು ದೂರ ಮಾಡಿದೆ. ಇದರಿಂದ ಶ್ರೀರಾಮ ಭಕ್ತಿಯ ಉತ್ತೇಜನ ಆಗಿದೆ. ಎಲ್ಲ ಹಿಂದು ಶ್ರದ್ಧಾಕೇಂದ್ರಗಳ ಕಂಟಕವು ಇದೇ ರೀತಿ ದೂರವಾಗಲಿ ಎಂದು ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

‘ಪ್ರಕರಣದಲ್ಲಿ ಎಲ್ಲ ಧಾರ್ಮಿಕ-ಸಾಮಾಜಿಕ ನಾಯಕರು ನಿರ್ದೋಷಿಗಳೆಂದು ತೀರ್ಪು ನೀಡಿರುವುದು ಸಂತಸ ತಂದಿದೆ. ಆರೋಪಗಳಿಂದ ವ್ಯಕ್ತಿಗಳನ್ನು ಹತ್ತಿಕ್ಕುತ್ತೇವೆ ಎಂಬ ಭಾವನೆಗೆ ಸೋಲು ಉಂಟಾಗಿದೆ. ಸತ್ಯಮೇವ ಜಯತೆ ಮಾತು ಸತ್ಯವಾಗಿದೆ. ಆಪಾದನೆಗಳ ಕಳಂಕ ದೂರ ಮಾಡಿದ ತೀರ್ಪು ಸ್ವಾಗತಾರ್ಹ’ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

ನ್ಯಾಯಾಲಯದ ತೀರ್ಪು ಸನಾತನ ಸಂಸ್ಕೃತಿಗೆ ಸಂದ ಗೌರವ. ಇದೊಂದು ನ್ಯಾಯ, ಧರ್ಮದ ಪರವಾದ ಐತಿಹಾಸಿಕ ತೀರ್ಪು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಸತ್ಯಕ್ಕೆ ಸಂದ ಜಯವೆಂದ ಬಿಜೆಪಿ

ಆಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾಭಾರತಿ ಸಹಿತ ಎಲ್ಲ ನಾಯಕರ ಮೇಲಿನ ಆರೋಪವನ್ನು ಮುಕ್ತಗೊಳಿಸಿರುವ ತೀರ್ಪನ್ನು ದ.ಕ. ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಸುದರ್ಶನ ಎಂ. ತಿಳಿಸಿದ್ದಾರೆ. ಈ ತೀರ್ಪು ಐತಿಹಾಸಿಕವಾದುದು. ಎಲ್ಲ 32 ಆರೋಪಿಗಳನ್ನು ನಿರ್ದೋಷಿಗಳೆಂದು ಘೋಷಿಸಿರುವುದು ಸತ್ಯಕ್ಕೆ ಸಂದ ಜಯ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಸತ್ಯ ಎಂದಿಗೂ ಸತ್ಯವೇ ಆಗಿರುತ್ತದೆ. ಈಗ ಈ ತೀರ್ಪು ನಮ್ಮ ನಂಬಿಕೆಯನ್ನು ಸಾಕ್ಷಾತ್ಕರಿಸಿದಂತಾಗಿದೆ. ಪಕ್ಷದ ಹಿರಿಯ ನಾಯಕರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ದೊಡ್ಡ ರಾಜಕೀಯ ಷಡ್ಯಂತ್ರ ನಡೆದಿತ್ತು. ಆದರೆ ಈ ನ್ಯಾಯನಿರ್ಣಯದಿಂದ ಪಟ್ಟಭದ್ರರಿಗೆ ಮುಖಭಂಗವಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ಕಾರ್ಯಕರ್ತರಿಗೆ ನಿಟ್ಟುಸಿರು

ತೀರ್ಪಿನ ಮೂಲಕ ಭಾರತದ ಜನರ ಭಾವನೆಗಳಿಗೆ ಸ್ಪಂದಿಸಿದಂತಾಗಿದ್ದು, ಎಲ್ಲ ನಾಗರಿಕರು ಈ ತೀರ್ಪು ಒಪ್ಪಿಕೊಂಡು ಶಾಂತಿ ಸೌಹಾರ್ದ ಕಾಪಾಡಿಕೊಳ್ಳಬೇಕೆಂದು ಶಾಸಕ ಡಾ.ವೈ.ಭರತ್ ಶೆಟ್ಟಿ ತಿಳಿಸಿದ್ದಾರೆ.

ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿ, ಹಿಂದು ಸಮಾಜ ಹಾಗೂ ಶ್ರೀರಾಮ ಜನ್ಮ ಸ್ಥಳವನ್ನು ಉಳಿಸಬೇಕೆಂದು ಹೋರಾಟ ನಡೆಸಿದವರ ಮೇಲಿನ ಆರೋಪ ಖುಲಾಸೆಗೊಂಡಿರುವುದು ಶ್ರೀ ರಾಮನ ಮೂಲಕ ಹಿಂದು ಸಮಾಜಕ್ಕೆ ಸಿಕ್ಕಿರುವ ಜಯ ಎಂದಿದ್ದಾರೆ.

ಹಿರಿಯರು ಪಟ್ಟ ಶ್ರಮ, ತ್ಯಾಗವನ್ನು ಅವಲೋಕಿಸಿದಾಗ ನ್ಯಾಯಾಲಯದ ತೀರ್ಪಿನಿಂದ ಲಕ್ಷಾಂತರ ಕಾರ್ಯಕರ್ತರು ನಿಟ್ಟುಸಿರು ಬಿಡುವಂತಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.