ನಂಜನಗೂಡು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಯಿಂದ ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಶಾಸಕ ದರ್ಶನ್ ಧ್ರುವನಾರಾಯಣ ಅವರು ಮಾಲಾರ್ಪಣೆ ಮಾಡುವ ಮೂಲಕ ಸೋಮವಾರ ಡಾ.ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ಬಾಬಾ ಸಾಹೇಬರ ತತ್ವ, ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿವೆ. ಅವರ ಚಿಂತನೆಗಳು ಮತ್ತು ಆಶಯಗಳ ಮೂಲಕ ನಮ್ಮೊಂದಿಗೆ ಇನ್ನು ಜೀವಂತವಾಗಿದ್ದಾರೆ. ಸಂವಿಧಾನ ಎಂಬ ಬೃಹತ್ ಗ್ರಂಥವನ್ನು ಕೊಡುಗೆಯಾಗಿ ನೀಡಿದ್ದ ಪರಿಣಾಮ ನಮ್ಮ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ನಮ್ಮ ಕರ್ತವ್ಯಗಳನ್ನು ಅರಿತು ಅವರ ಮೂಲ ಚಿಂತನೆಗಳು ಮತ್ತು ತತ್ವ ಆದರ್ಶಗಳನ್ನು ನಾವು ಪಾಲಿಸಿದಾಗ ಮಾತ್ರ ಡಾ.ಅಂಬೇಡ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ ಎಂದರು.
ನಮ್ಮ ರಾಜ್ಯ ಸರ್ಕಾರ ಭಾರತದ ಸಂವಿಧಾನದ ಮತ್ತು ಡಾ. ಅಂಬೇಡ್ಕರ್ ಅವರ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದೆ. ಸಂವಿಧಾನದಿಂದ ಇಂದು ಕೋಟ್ಯಂತರ ಜನರು ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿಯೊಬ್ಬರು ಅವರನ್ನು ನೆನೆಯಬೇಕು ಎಂದರು.
ಭಾರತದ ಸಂವಿಧಾನದ ಪೀಠಿಕೆಯನ್ನು ಬೋಧನೆ ಮಾಡಲಾಯಿತು. ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ಇತರರಿದ್ದರು.