ಜಿಲ್ಲೆ

ಬಾಬಾ ಸಾಹೇಬರು ಸರ್ವವ್ಯಾಪಿ: ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಬಣ್ಣನೆ

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ವ್ಯಕ್ತಿತ್ವ, ಕಾರ್ಯ ಮತ್ತು ಚಿಂತನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯ ಇದೆ ಎಂದು ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಹೇಳಿದರು.


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ಮುಕ್ತಗಂಗೋತ್ರಿ ಘಟಿಕೋತ್ಸವ ಭವನದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಮಕಾಲೀನ ಪ್ರಪಂಚದ ಅಭಿವೃದ್ಧಿ ದೃಷ್ಟಿಕೋನ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


ಪ್ರಸ್ತುತ ಸಮಯದಲ್ಲಿ ನಾವು ಅವರ ಆಲೋಚನೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಮತ್ತು ಕಾರ್ಯಗತಗೊಳಿಸಿದರೆ, ನಾವು ವೇಗವಾಗಿ ಯಶಸ್ಸಿನತ್ತ ಸಾಗಬಹುದು. ಅವರ ಚಿಂತನೆಯನ್ನು ಜನಸಾಮಾನ್ಯರಿಗೆ ಹರಡಲು, ಭಾರತ ಸರ್ಕಾರವು ಅವರಿಗೆ ಸಂಬಂಧಿಸಿದ 5 ಪ್ರಮುಖ ಸ್ಥಳಗಳನ್ನು ಪಂಚತೀರ್ಥ ಎಂದು ಘೋಷಿಸಿದೆ ಎಂದರು.


ಡಾ.ಅಂಬೇಡ್ಕರ್ ಅವರ ಚಿಂತನೆ , ಸರ್ವತೋಮುಖ ಅಭಿವೃದ್ಧಿಯ ನೀತಿಗಳು ಇಂದಿಗೂ ಪ್ರಸ್ತುತವಾಗಿವೆ. ಸುಸ್ಥಿರ ಅಭಿವೃದ್ಧಿ, ಅರ್ಥಪೂರ್ಣ ಬದಲಾವಣೆಗೆ ಮಾರ್ಗಸೂಚಿ ಒದಗಿಸುತ್ತವೆ. ಅವರ ತತ್ವಗಳು, ಮೌಲ್ಯಗಳಿಂದ ಪ್ರೇರಿತರಾಗಿ ಮಾನವ ಹಕ್ಕು ಎತ್ತಿಹಿಡಿಯಲು, ಸಾಮಾಜಿಕ ನ್ಯಾಯವನ್ನು ಉತ್ತೇಜಿಸಲು ಮತ್ತು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ಪ್ರತಿಯೊಬ್ಬರೂ ಬದ್ಧತೆ ಮೇಲೆ ಕಾರ್ಯನಿರ್ವಹಿಸಬೇಕು ಎಂದರು.


ನಾವೆಲ್ಲರೂ ಒಟ್ಟಾಗಿ ಅಂಬೇಡ್ಕರ್ ಅವರು ತೋರಿಸಿದ ಮಾರ್ಗವನ್ನು ಅನುಸರಿಸಬೇಕಾಗಿದೆ. ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಹೋಗಲಾಡಿಸಲು, ಸಾಮರಸ್ಯವನ್ನು ತರಲು ಮತ್ತು ದೇಶದ ಏಕತೆ, ಸಮಗ್ರತೆಯನ್ನು ಬಲಪಡಿಸಲು ಶ್ರಮಿಸಬೇಕು ಎಂದು ಹೇಳಿದರು.


ಅಂಬೇಡ್ಕರ್ ಅವರು ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಔದ್ಯಮಿಕ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅಸಂಖ್ಯಾತ ಕೆಲಸ ಮಾಡುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ ಎಂದರು.


ಉನ್ನತ ಶಿಕ್ಷಣ ಪಡೆದು ಅವರು ಬಯಸಿದ್ದರೆ ಲಂಡನ್, ಅಮೆರಿಕಾ ಅಥವಾ ದೇಶದಲ್ಲೇ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಬಹುದಿತ್ತು. ತನ್ನ ಮತ್ತು ಕುಟುಂಬದ ಯೋಗಕ್ಷೇಮದ ಬಗ್ಗೆ ಯೋಚಿಸುವ ಬದಲು ಸಾಮಾಜಿಕ ಸೇವೆ ಆಯ್ದುಕೊಂಡರು. ಅಸಮಾನತೆ ತೊಡೆದು ಹಾಕಲು ಕೆಲಸ ಮಾಡಿದರು ಎಂದರು.


ಬಾಬಾ ಸಾಹೇಬರು ಸರ್ವವ್ಯಾಪಿ, ಸರ್ವ ಸ್ನೇಹಿ ಮತ್ತು ಸರ್ವಸ್ಪರ್ಶಿಯಾಗಿದ್ದರು. ಸಮಾನತೆ, ಭ್ರಾತೃತ್ವ ಮತ್ತು ಮಾನವೀಯತೆಯ ಆಧಾರದ ಮೇಲೆ ಭಾರತೀಯ ಸಂವಿಧಾನವನ್ನು 2 ವರ್ಷ, 11 ತಿಂಗಳು ಮತ್ತು 17 ದಿನಗಳ ಕಠಿಣ ಪರಿಶ್ರಮದ ನಂತರ ಬರೆಯಲಾಯಿತು ಎಂದು ಹೇಳಿದರು.


ಭಾರತದಲ್ಲಿ ಆರ್ಥಿಕ ಏಳಿಗೆಗಾಗಿ ಅವರ ಕೆಲಸ ಅನುಕರಣೀಯವಾಗಿದೆ. ಕೈಗಾರಿಕಾ ಅಭಿವೃದ್ಧಿ, ನೀರು ಕೊಯ್ಲು, ನೀರಾವರಿ, ಕಾರ್ಮಿಕರು, ರೈತರ ಉತ್ಪಾದಕತೆ, ಆದಾಯವನ್ನು ಹೆಚ್ಚಿಸುವ ಮೂಲಕ ಸಾರ್ವಭೌಮ ಸಮಾಜವಾದಿ ಗಣರಾಜ್ಯ ಸ್ಥಾಪನೆಗೆ ಅನೇಕ ಕೆಲಸ ಮಾಡಿದ್ದಾರೆ.

ಮಹಾನದಿಯ ನಿರ್ವಹಣೆಯ ಬಹುಪಯೋಗಿ ಸೂಕ್ತತೆಯನ್ನು ಪರಿಶೀಲಿಸುವ ಮೂಲಕ, ಅವರು ಜಲ ನೀತಿ ಮತ್ತು ಕೈಗಾರಿಕೀಕರಣದ ಬಹುಪಯೋಗಿ ಆರ್ಥಿಕ ಯೋಜನೆ, ರಾಷ್ಟ್ರೀಯ ಜಲಮಾರ್ಗಗಳು, ಕೇಂದ್ರ ನೀರು ಮತ್ತು ವಿದ್ಯುತ್ ನೀತಿ ರಚನೆಗೆ ಪ್ರೇರಣೆಯಾದರು. ಭಾರತದ ಅಭಿವೃದ್ಧಿಗಾಗಿ ಬಲವಾದ ತಾಂತ್ರಿಕ ಸಂಘಟನೆಯ ಸಂಪರ್ಕ ಜಾಲವನ್ನು ರಚನೆಯನ್ನು ಪ್ರಸ್ತುತ ಪಡಿಸಿದರು ಎಂದರು.


ಚುನಾವಣಾ ಆಯೋಗ, ಯೋಜನಾ ಆಯೋಗ, ಹಣಕಾಸು ಆಯೋಗ, ಪುರುಷರು ಮತ್ತು ಮಹಿಳೆಯರಿಗೆ ಸಮಾನ ನಾಗರಿಕರು, ಹಿಂದು ಕೋಡ್, ರಾಜ್ಯ ಮರುಸಂಘಟನೆ, ರಾಜ್ಯ ನೀತಿಯ ನಿರ್ದೇಶನ ತತ್ವಗಳು, ಮೂಲಭೂತ ಹಕ್ಕುಗಳು, ಮಾನವ ಹಕ್ಕುಗಳು, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ರಚನೆ ಮಾಡಿದರು ಎಂದು ಮಾಹಿತಿ ನೀಡಿದರು.


ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಯಗಟಿ ಚಿನ್ನರಾವ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಇನ್ನಿತರರಿದ್ದರು.