ವಿಜಯವಾಣಿ ಸುದ್ದಿಜಾಲ ಗದಗ
ಗ್ರಾಮೀಣ ಭಾಗದ ಬೆನ್ನೆಲೆಬು ಆಗಿರುವ ಗ್ರಾಪಂ ನೌಕರ ಸಿಬ್ಬಂದಿಗೆ ಬೆನ್ನೆಲಬಾಗಿ ನಾವು ಇದ್ದೇವೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಅಬ್ಬಿಗೇರಿ ಗ್ರಾಮದಲ್ಲಿ ನಡೆಯುತ್ತಿರುವ ದಸಾರ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕೂ ಮುನ್ನ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ನಡೆಯುತ್ತಿರುವ ಗ್ರಾಪಂ ನೌಕರರ ಅನಿದಿರ್ಷ್ಟಾವದಿ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಸಚಿವರು ಜಗತ್ತಿನ ಜ್ಞಾನವನ್ನು ತಲೆಯಲ್ಲಿ ಇಟ್ಟುಕೊಂಡು ಮಾತನಾಡುತ್ತಾರೆ. ಆದರೆ, ಗ್ರಾಮಿಣ ಭಾಗದಲ್ಲಿ ಕೆಲಸ ಮಾಡುವ ನಿಮ್ಮ ಮನವಿ ಸ್ವೀಕರಿಸಿ ಸ್ವಾಂತನ ಹೇಳಲು ಸಮಯಾವಕಾಶ ಅವರಿಗಿಲ್ಲ ಎಂದು ಆರೋಪಿಸಿದರು.
ಗ್ರಾಪಂ ನೌಕರ ಸಿಬ್ಬಂದಿ ಜತೆಗೆ ನಾವಿದ್ದೇವೆ. ರಾಜಕಾರಣ ಹೊರಗಿಟ್ಟು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ. ಸಿಎಂ ಅವರನ್ನು ಭೇಟಿ ಮಾಡಿ ನಿಮ್ಮ ಮನವಿ ಸಲ್ಲಿಸಿ ಸಮಸ್ಯೆಗಳನ್ನು ಬಗೆಹರಿಸಲು ಖಂಡಿತ ಆಗ್ರಹಿಸುತ್ತೇನೆ ಎಂದು ವಿಜಯೇಂದ್ರ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು, ರಾಜು ಕುರಡಗಿ, ಅನಿಲ ಅಬ್ಬಿಗೇರಿ ಇತರರು ಇದ್ದರು.
ಅಹಿಂದ ಹೆಸರಿಗೆ ಅನ್ಯಾಯ:
ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದು ಅಹಿಂದ ಸಮುದಾಯಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಿದ್ದ ಹಣವನ್ನು ಬೇರೆ ಕೆಲಸಗಳಿಗೆ ಬಳಸಿಕೊಂಡಿದೆ. ವಾಲ್ಮಿಕಿ ನಿಗಮ ಹಗರಣ ಬಗ್ಗೆ ದೇಶದಲ್ಲೇ ಚರ್ಚೆ ಆಗುತ್ತಿದೆ. ಅಹಿಂದ ಅನ್ನು ಕಾಂಗ್ರೆಸ್ ಕೇವಲ ಮತಬ್ಯಾಂಕ್ ಆಗಿ ಪರಿಗಣಿಸುತ್ತಿದೆ ಎಂದು ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ಮೇಲೆ ಹರಿಹಾಯ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ದಿ ಯೋಜನೆಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ. ಹೊಸ ಯೋಜನೆಗಳಿಗೆ ತಯಾರಿ ಇಲ್ಲ. ಗ್ಯಾರಂಟಿಗಳ ಬಗ್ಗೆ ಉದ್ದೂದ್ದ ಭಾಷಣ ಮಾಡುವ ಕಾಂಗ್ರೆಸ್ ನಾಯಕರಿಗೆ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನ ತರಲು ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.