ಜಿಲ್ಲೆ

ವಿಧಾನಸಭೆ ಪ್ರವೇಶಿಸುವ ಮುನ್ನ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದಿರುವೆ: ಬಿ.ವೈ.ವಿಜಯೇಂದ್ರ

ತುಮಕೂರು: ಶಿಕಾರಿಪುರ ಕ್ಷೇತ್ರದಲ್ಲಿ ವಿಜಯಶಾಲಿಯಾಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೋಮವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ಧಲಿಂಗಸ್ವಾಮೀಜಿ ಆಶಿರ್ವಾದ ಪಡೆದರು.

ತಮ್ಮ ಕುಟುಂಬದ ಸದಸ್ಯರೊಂದಿಗೆ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಅವರು, ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಸಿದ್ದಲಿಂಗಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ನನಗೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ.ಅಲ್ಲದೆ ಪಕ್ಷದ ಕಾರ್ಯಕರ್ತರು, ಮುಖಂಡರು ಹಗಲಿರುಳೆನ್ನದೆ ದುಡಿದು ನನ್ನನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದಾರೆ ಎಂದು ಸ್ಮರಿಸಿದರು.

ನನ್ನ ಕ್ಷೇತ್ರದ ಜನತೆಯ ಆಶೀರ್ವಾದದ ಜತೆಗೆ ಶ್ರೀಸಿದ್ದಗಂಗಾ ಶ್ರೀಗಳ ಆಶೀರ್ವಾದಕ್ಕಾಗಿ ಬಂದಿದ್ದೇನೆ, ರಾಜ್ಯದಲ್ಲಿನ ದೇವಾಲಯ, ಮಠಗಳಿಗೆ ಭೇಟಿ ನೀಡಿ ಗುರು, ಹಿರಿಯರ ಆಶಿರ್ವಾದ ಪಡೆಯುತ್ತಿದ್ದೇನೆ ಎಂದರು.

ನಮ್ಮ ತಂದೆಯವರು ಯಾವುದೇ ಒಳ್ಳೆಯ ಕೆಲಸ ಮಾಡುವ ಮುನ್ನ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆಯುವುದು ವಾಡಿಕೆ. ಹಾಗಾಗಿ, ನಾನು ಕೂಡ ವಿಧಾನಸಭೆ ಪ್ರವೇಶಿಸುವ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದರು.

ಈ ವೇಳೆ ಬಿ.ವೈ.ವಿಜಯೇಂದ್ರ ಅವರ ಪತ್ನಿ ಪ್ರೇಮ, ಪುತ್ರಿಯರಾದ ಮೈತ್ರಿ, ಝಾನ್ಸಿ, ಶಾಸಕ ಜಿ.ಬಿ.ಜೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಹೆಬ್ಬಾಕ, ಮುಖಂಡರಾದ ಚೇತನ್, ಜಿಲ್ಲಾ ಮಾಧ್ಯಮ ಪ್ರಮುಖ ಟಿ.ಆರ್.ಸದಾಶಿವಯ್ಯ ಇದ್ದರು.