ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗುರುವಾರ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ನಾಮಪತ್ರ ಸಲ್ಲಿಸಿದರು. ಪತ್ನಿ ತೇಜಸ್ವಿನಿ, ಶಾಸಕಿ ಶಾರದಾ ಪೂರ‌್ಯಾನಾಯಕ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಉಪಸ್ಥಿತರಿದ್ದರು.  
ಜಿಲ್ಲೆ

ಬಿ.ವೈ.ರಾಘವೇಂದ್ರ ಆಸ್ತಿ 55.85 ಕೋಟಿ ರೂ.

ಶಿವಮೊಗ್ಗ: ಬಿ.ವೈ.ರಾಘವೇಂದ್ರ 24.76 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ 31.09 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 2019ರ ಚುನಾವಣೆ ಸಂದರ್ಭದಲ್ಲಿ ಇವರು 32,09 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 42.94 ಕೋಟಿ ರೂ. ಮೌಲ್ಯದ ಸ್ಥಿರಾಸಿ ಹೊಂದಿದ್ದರು.

ರಾಘವೇಂದ್ರ ಪತ್ನಿ ತೇಜಸ್ವಿನಿ ಬಳಿ 17.86 ಕೋಟಿ ರೂ. ಮೌಲ್ಯದ ಆಸ್ತಿಯಿದೆ. ರಾಘವೇಂದ್ರ ತಮ್ಮ ಸಹೋದರ ಬಿ.ವೈ.ವಿಜಯೇಂದ್ರ ಅವರಿಗೆ 85 ಲಕ್ಷ ರೂ., ಪತ್ನಿ ತೇಜಸ್ವಿನಿಗೆ 5.49 ಕೋಟಿ ರೂ., ಪುತ್ರ ಭಗತ್‌ಗೆ 65 ಲಕ್ಷ ರೂ., ಮತ್ತೊಬ್ಬ ಪುತ್ರ ಸುಭಾಷ್‌ಗೆ 85 ಲಕ್ಷ ರೂ. ಸಾಲ ನೀಡಿದ್ದಾರೆ. ಬಿ.ವೈ,ರಾಘವೇಂದ್ರ ಒಟ್ಟು 69.39 ಲಕ್ಷ ರೂ. ಹಾಗೂ ತೇಜಸ್ವಿನಿ 12.91 ಕೋಟಿ ರೂ. ಸಾಲ ತೀರಿಸಬೇಕಿದೆ.
ರಾಘವೇಂದ್ರ ಬಳಿ 1,021.50 ಗ್ರಾಂ ಚಿನ್ನಾಭರಣವಿದೆ. 114.26 ಕ್ಯಾರೆಟ್ ವಜ್ರ, 8.6 ಕೆ.ಜಿ ಬೆಳ್ಳಿ, 42 ಬೆಲೆಬಾಳುವ ಹರಳುಗಳಿವೆ. ಇವುಗಳ ಮೌಲ್ಯ 98.83 ಲಕ್ಷ ರೂ., ತೇಜಸ್ವಿನಿ ಬಳಿ 1,395.92 ಗ್ರಾಂ ಚಿನ್ನಾಭರಣಗಳಿವೆ, 96.022 ಕ್ಯಾರೆಟ್ ವಜ್ರ, 5.1 ಕೆ.ಜಿ ಬೆಳ್ಳಿ ಇದೆ. ಇದರ ಮೌಲ್ಯ 1.13 ಕೋಟಿ ರೂ.
ಪುರಸಭಾ ಸದಸ್ಯರಾಗಿ ರಾಜಕೀಯ ಪ್ರಾರಂಭ. 2009ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಂಗಾರಪ್ಪ ವಿರುದ್ಧ ಗೆಲುವು, 2014ರ ಉಪಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆ ಪ್ರವೇಶ, 2018ರ ಲೋಕಸಭೆ ಉಪಚುನಾವಣೆ, 2019ರ ಚುನಾವಣೆಯಲ್ಲಿ ಸತತ ಎರಡು ಬಾರಿ ಮಧು ಬಂಗಾರಪ್ಪ ವಿರುದ್ಧ ಗೆಲುವು, ಈಗ ನಾಲ್ಕನೇ ಬಾರಿ ಲೋಕಸಭೆ ಪ್ರವೇಶಕ್ಕೆ ಸ್ಪರ್ಧೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹಿರಿಯ ಪುತ್ರ.