ಆರ್.ತುಳಸಿಕುಮಾರ್
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿರುವ ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ಸೌಲಭ್ಯ ನೀಡುವ ಪ್ರಕ್ರಿಯೆಗೆ ನ.2ರಿಂದ ಅಧಿಕೃತ ಚಾಲನೆ ಸಿಗಲಿದೆ. ಆನ್‌ಲೈನ್ ಮೂಲಕವೇ ಸೌಲಭ್ಯ ಒದಗಿಸಲು ಜಿಬಿಎ ನಿರ್ಧರಿಸಿದ್ದು, ಇದಕ್ಕಾಗಿ ಸಂಸ್ಥೆಯ ವೈಬ್‌ಸೈಟ್ ಹಾಗೂ ವಿಶೇಷ ಆ್ಯಪ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಎರಡು ಸಾವಿರ ಚದರ ಮೀಟರ್ (40/50 ಅಡಿ ವಿಸ್ತೀರ್ಣದ ಸೈಟ್‌ವರೆಗೆ) ವಿಸ್ತೀರ್ಣದವರೆಗಿನ ಸ್ವತ್ತುಗಳಿಗೆ ಎ ಖಾತಾ ಸೌಲಭ್ಯ ಸಿಗಲಿದೆ. ಆದರೆ, ಮೊದಲು ನಿವೇಶನಕ್ಕೆ ಮಾತ್ರ ಎ ಖಾತಾ ದೊರೆಯಲಿದ್ದು, ನಂತರದ ದಿನಗಳಲ್ಲಿ ಸರ್ಕಾರ ಪ್ರತ್ಯೇಕವಾಗಿ ರೂಪಿಸುವ ನಿಯಮದಡಿ ಆ ಸೈಟ್‌ಗಳಲ್ಲಿ ನಿರ್ಮಿಸಿರುವ ಕಟ್ಟಡಗಳಿಗೆ ಎ ಖಾತಾ ಮಾನ್ಯತೆ ಸಿಗಲಿದೆ. ಈ ವಿಷಯವನ್ನು ಜಿಬಿಎ ಅಧಿಕಾರಿಗಳು ತಿಳಿಸಿದ್ದು, ಸೈಟ್ ಹಾಗೂ ಕಟ್ಟಡಕ್ಕೆ ಪ್ರತ್ಯೇಕವಾಗಿ ಸೌಲಭ್ಯ ವಿತರಣೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆನ್‌ಲೈನ್‌ನಲ್ಲಿ ಸ್ವತ್ತಿನ ಮಾಲೀಕರು ಜಿಬಿಎ ನಿಗದಿಪಡಿಸಿರುವ ದಾಖಲೆಪತ್ರಗಳನ್ನು ಒದಗಿಸಬೇಕಿದೆ. ಆಧಾರ್ ಕಾರ್ಡ್, ಸ್ವತ್ತಿನ ನೋಂದಣಿ ಪತ್ರ, ಬಿ ಖಾತಾ, ವಾಸಸ್ಥಳದ ವಿಳಾಸ, ಕಂದಾಯ ಹಾಗೂ ಇತರ ಶುಲ್ಕ ಪಾವತಿ ವಿವರಗಳನ್ನು ಒದಗಿಸಬೇಕಾಗುತ್ತದೆ. ಈ ಎಲ್ಲ ಮಾಹಿತಿಯನ್ನು ಮಾಲೀಕರೇ ಸ್ವತ: ಜಿಬಿಎ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬಹುದಾಗಿದೆ. ಇದನ್ನು ಹಂತ ಹಂತವಾಗಿ ಹೇಗೆ ಮಾಡಬೇಕೆಂಬುದನ್ನು ಶೀಘ್ರದಲ್ಲೇ ಜಿಬಿಎ ವಿವರಣೆ ನೀಡಲಿದೆ. ಸದ್ಯ ಸಾಫ್ಟ್ವೇರ್ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆಗಲಿದೆ.
ಪರಿಶೀಲನೆ ಬಳಿಕ ಶುಲ್ಕ ಪಾವತಿ:
ಒಮ್ಮೆ ಸ್ವತ್ತಿನ ಮಾಲೀಕರು ಅರ್ಜಿ ಸಲ್ಲಿಸಿದ ಬಳಿಕ ಕಾಲಮಿತಿಯೊಳಗೆ ಜಿಬಿಎ ಸಿಬ್ಬಂದಿ ಸದರಿ ಸ್ವತ್ತಿನ ಸ್ಥಳಪರಿಶೀಲನೆ ನಡೆಸಲಿದ್ದಾರೆ. ಮಾಲೀಕರಿಂದಲೇ ಅಗತ್ಯ ದಾಖಲೆಗಳನ್ನು ದೃಢಪಡಿಸಿಕೊಂಡು ಪರಾಮರ್ಶೆಗೆ ಒಳಪಡಿಸಲಾಗುತ್ತದೆ. ಎ ಖಾತಾ ನೀಡುವ ಮಾರ್ಗಸೂಚಿಯಲ್ಲಿನ ಅಂಶಗಳೊಂದಿಗೆ ತಾಳೆ ಆದಲ್ಲಿ ನಿಯಮಾನುಸಾರ ಸೌಲಭ್ಯ ವಿತರಿಸಲು ಹಸಿರುನಿಶಾನೆ ನೀಡಲಾಗುತ್ತದೆ. ಈ ಹಂತದಲ್ಲಿ ವಿವಿಧ ಶುಲ್ಕಗಳ ಲೆಕ್ಕಾಚಾರ ನಡೆಸಿ ಪಾವತಿಗೆ ಗಡುವು ನೀಡಲಾಗುತ್ತದೆ. ಅಲ್ಲಿಯವರೆಗೂ ಅರ್ಜಿ ನೋಂದಣಿಯ 500 ರೂ. ಹೊರತುಪಡಿಸಿ ಇತರ ಶುಲ್ಕವನ್ನು ಕಟ್ಟುವ ಅಗತ್ಯವಿಲ್ಲ. ಪೂರ್ತಿ ಹಣ ಪಾವತಿ ಬಳಿಕವೇ ಎ ಖಾತಾ ದಾಖಲಾತಿ ವಿತರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣ ಹೊಂದಿಸಲು ಹರಸಾಹಸ ತಪ್ಪದು:
ಎ ಖಾತಾ ಸೌಲಭ್ಯ ಪಡೆಯಲು ಪ್ರತಿಯೊಬ್ಬ ಸ್ವತ್ತುದಾರನು ದೊಡ್ಡ ಮೊತ್ತವನ್ನು ಪಾವತಿಸಬೇಕಿದೆ. ಇದು ಸೈಟ್ ವಿಸ್ತೀರ್ಣ, ಬಡಾವಣೆ, ವಾಸದ ಪ್ರದೇಶ ಹಾಗೂ ಮಾರ್ಗಸೂಚಿ ದರ ನಿಗದಿಯಾದ ಸ್ಥಳದ ನಿಖರ ಮಾಹಿತಿಯನ್ನು ಆಧರಿಸಿರುತ್ತದೆ. ಸ್ಥಳದಿಂದ ಸ್ಥಳಕ್ಕೆ ಶುಲ್ಕವು ವ್ಯತ್ಯಾಸ ಆಗಲಿದೆ. ಸ್ವತ್ತಿನ ಸ್ಥಳದಲ್ಲಿರುವ ಮಾರ್ಗಸೂಚಿ ದರದ ಶೇ.5 ಅನುಮೋದನೆ ಶುಲ್ಕ ಜತೆಗೆ ಭೂ ಪರಿವರ್ತನೆ ಶುಲ್ಕ, ನಕ್ಷೆ ಅನುಮೋದನೆ ಶುಲ್ಕ, ಅಭಿವೃದ್ಧಿ ಶುಲ್ಕ, ಕಂದಾಯ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ. ಆದರೆ, ಹೆಚ್ಚಿನ ಮಂದಿಗೆ ಮಾರ್ಗಸೂಚಿ ದರದ ಶೇ.5 ಶುಲ್ಕ ಪಾವತಿ ಅನಿವಾರ್ಯವಾದರೂ, ಹಣ ಹೊಂದಿಸಲು ಹರಸಾಹಸ ಮಾಡಬೇಕಿದೆ. ನೋಂದಣಿ ಶುಲ್ಕವನ್ನು ಹೊರತುಪಡಿಸಿ ಇನ್ನಿತರ ಶುಲ್ಕವನ್ನು ಒಮ್ಮೆಲೇ ಪಾವತಿಸಬೇಕಿದೆ. 30/40 ಅಡಿ ವಿಸ್ತೀರ್ಣದ ಸೈಟ್‌ಗೆ ಅನುಮೋದಿತ ಶುಲ್ಕ ಬಿಟ್ಟು ಇತರ ವೆಚ್ಚಗಳು ಒಂದು ಲಕ್ಷ ರೂ. ಆಗಬಹುದೆಂದು ಲೆಕ್ಕಾಚಾರ ಇದೆ. ಒಟ್ಟಾರೆ ಆಯಾ ಪ್ರದೇಶ ಆಧರಿಸಿ 3 ಲಕ್ಷ ರೂ.ನಿಂದ 8 ಲಕ್ಷ ರೂ.ವರೆಗೆ ಶುಲ್ಕ ಪಾವತಿಸಬೇಕಾಗುವುದರಿಂದ ಬಡ/ಮಧ್ಯಮ ವರ್ಗದವರಿಗೆ ಹೊರೆ ಆಗಲಿದೆ ಎಂಬ ಮಾತು ಕೇಳಿಬಂದಿದೆ.
5 ಬಗೆಯ ಶುಲ್ಕ ಪಾವತಿಸಬೇಕು:
ಬಿ ಖಾತಾ ಸ್ವತ್ತುಗಳಿಗೆ ಎ ಖಾತಾ ಸೌಲಭ್ಯ ಪಡೆಯಲು ಐದು ಬಗೆಯ ಶುಲ್ಕವನ್ನು ಜಿಬಿಎ ಪಾವತಿಸಬೇಕಾಗುತ್ತದೆ. ಆರಂಭದಲ್ಲಿ ಅರ್ಜಿ ನೋಂದಣಿ ವೇಳೆ 500 ರೂ. ಪಾವತಿಸಬೇಕು. ಆ ಬಳಿಕ ಮಾರ್ಗಸೂಚಿ ದರದ ಶೇ.5 ಶುಲ್ಕ, ಭೂ ಪರಿವರ್ತನೆ ಶುಲ್ಕ, ನಕ್ಷೆ ಅನುಮೋದನೆ ಶುಲ್ಕ, ಅಭಿವೃದ್ಧಿ ಶುಲ್ಕ, ಕಂದಾಯ ಶುಲ್ಕ ಕಟ್ಟಬೇಕಾಗುತ್ತದೆ.
ಶುಲ್ಕ ಇಳಿಕೆಗೆ ಜನರ ಆಗ್ರಹ:
ಬಿ ಖಾತಾ ಸ್ವತ್ತುಗಳನ್ನು ಎ ಖಾತೆಗೆ ಪರಿವರ್ತಿಸಿಕೊಳ್ಳಲು ವಿಧಿಸಿರುವ ಅನುಮೋದನೆ ಶುಲ್ಕ ದುಬಾರಿಯಾಗಿದೆ ಎಂಬ ಮಾತು ಕೇಳಿಬಂದಿದೆ. ಮಾರ್ಗಸೂಚಿ ದರದ ಶೇ.5 ಮೊತ್ತವನ್ನು ಅನುಮೋದಿತ ಶುಲ್ಕವಾಗಿ ನಿಗದಿ ಮಾಡಿರುವುದರಿಂದ 30/40 ಸೈಟ್‌ಗೆ 3-4 ಲಕ್ಷ ರೂ. ಆಗಲಿದೆ. ಜತೆಗೆ ಇನ್ನಿತರ ಶುಲ್ಕವೂ ಸೇರಿ 5 ಲಕ್ಷ ರೂ.ಗೂ ಏರಿದರೂ ಅಚ್ಚರಿ ಪಡಬೇಕಿಲ್ಲ. ಇದಾದ ಬಳಿಕ ಕಟ್ಟಡವನ್ನು ಸಕ್ರಮ ಮಾಡಿಕೊಳ್ಳಲು ಮತ್ತೊಂದು ಬಾರಿ ಕನಿಷ್ಠ 1-2 ಲಕ್ಷ ರೂ. ವೆಚ್ಚ ಮಾಡಬೇಕಾಗುತ್ತದೆ. ಅಂದರೆ ಪ್ರಮುಖ ರಸ್ತೆ ಬಳಿ ಸೈಟ್ ಅಥವಾ ಮನೆ ನಿರ್ಮಿಸಿಕೊಂಡಿರುವ ಬಿ ಖಾತಾದಾರನೊಬ್ಬ 8-10 ಲಕ್ಷ ರೂ. ಪಾವತಿಸಲು ಸಾಧ್ಯವಾಗದು. ಹಾಗಾಗಿ ಈ ಮೊತ್ತದಲ್ಲಿ ಅರ್ಧದಷ್ಟು ಇಳಿಸುವಂತೆ ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಎ ಖಾತಾ ಸೌಲಭ್ಯ ಪಡೆಯಲು ಅಂದಾಜು ವೆಚ್ಚ (30/40 ಸೈಟ್‌ಗೆ):
ಪ್ರದೇಶ ಮಾರ್ಗಸೂಚಿ ದರ ಶೇ.5 ಅನುಮೋದನೆ ಶುಲ್ಕ
ಕೋಗಿಲು 2,500 ರೂ. 1.5 ಲಕ್ಷ ರೂ.
ಶ್ರೀರಾಮಪುರ 3,000 ರೂ. 1.80 ಲಕ್ಷ ರೂ.
ಕೊಡಿಗೇಹಳ್ಳಿ 3,720 ರೂ. 2.23 ಲಕ್ಷ ರೂ.
ವರ್ತೂರು 5,000 ರೂ. 3 ಲಕ್ಷ ರೂ.
ಯಲಹಂಕ 6,000 ರೂ. 3.60 ಲಕ್ಷ ರೂ.
ನಾಗಶೆಟ್ಟಿಹಳ್ಳಿ 6,500 ರೂ. 3.90 ಲಕ್ಷ ರೂ.
ಬೆಳ್ಳಂದೂರು 8,640 ರೂ. 5.18 ಲಕ್ಷ ರೂ.
ಸರ್ಕಾರ ಬಿ ಖಾತಾ ಸ್ವತ್ತುದಾರರಿಗೆ ಎ ಖಾತಾ ನೀಡುವ ನೆಪದಲ್ಲಿ ಶುಲ್ಕ ಹೇರಿಕೆ ಮೂಲಕ ಹಣ ಸಂಗ್ರಹಿಸಲು ಹೊರಟಿದೆ. ನಾಗರಿಕರಿಗೆ ಸೇವೆ ಹೆಸರಿನಲ್ಲಿ ಸೌಲಭ್ಯ ನೀಡಬೇಕೆ ಹೊರತು ಹಣ ವಸೂಲು ಮಾಡುವುದು ಪ್ರಜಾತಂತ್ರ ವಿರೋಧಿಯಾಗುತ್ತದೆ. ಮಾರ್ಗಸೂಚಿ ದರದ ಶೇ.5 ಶುಲ್ಕದಲ್ಲಿ ಮತ್ತಷ್ಟು ಇಳಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರದ ‘ದೀಪಾವಳಿ ಗಿಫ್ಟ್’ ಜನಸಾಮಾನ್ಯರಿಗೆ ‘ಹೊರೆಯ ಕೊಡುಗೆ’ ನೀಡಿದಂತಾಗುತ್ತದೆ.
- ಪದ್ಮನಾಭರೆಡ್ಡಿ, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ