ಮಂಡ್ಯ: ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ವರಿಷ್ಠರ ನಿರ್ಧಾರದಿಂದ ಬೇಸತ್ತು ಮಾಜಿ ಸಚಿವ ಬಿ.ಸೋಮಶೇಖರ್ ಬಿಜೆಪಿಗೆ ಗುಡ್‌ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾದರು. ಇದರೊಂದಿಗೆ ಕೆಪಿಸಿಸಿ ಉಪಾಧ್ಯಕ್ಷರೂ ಆದ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಜಿ ಸಿಎಂ ಸಿದ್ದರಾಮಯ್ಯ, ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಪಕ್ಷದ ಬಾವುಟ ಕೊಟ್ಟು ಸೋಮಶೇಖರ್ ಅವರನ್ನು ಸ್ವಾಗತಿಸಿದರು. ಹಲವು ವರ್ಷದಿಂದ ಬಿಜೆಪಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೋಮಶೇಖರ್, ಈ ಬಾರಿ ಚುನಾವಣೆಯಿಂದ ಕಣಕ್ಕಿಳಿಯಲು ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಮುನಿರಾಜು ಅವರಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದರು. ಡಿಕೆಶಿ, ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮಾತುಕತೆ ಫಲಪ್ರದವಾದ ಕಾರಣ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಾಲ್ಕು ಬಾರಿ ಶಾಸಕರು: ಮೀಸಲು ಕ್ಷೇತ್ರ ಮಳವಳ್ಳಿಯಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ ಸೋಮಶೇಖರ್ ಅವರಿಗಿದೆ. 1983ರಲ್ಲಿ ಜನತಾ ಪಕ್ಷದಿಂದ ಕಣಕ್ಕಿಳಿದು 6,621 ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಮಾತ್ರವಲ್ಲದೆ ಪ್ರಥಮ ಶಾಸಕರಾದ ಅವಧಿಯಲ್ಲಿಯೇ ರಾಮಕೃಷ್ಣ ಹೆಗ್ಡೆ ಅವರ ಸಚಿವ ಸಂಪುಟದಲ್ಲಿ ಪ್ರಾಥಮಿಕ ಹಾಗೂ ವಯಸ್ಕರ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾರೆ.
1985ರಲ್ಲಿ ಜನತಾ ಪಕ್ಷದಿಂದ ಮತ್ತೆ ಸೋಮಶೇಖರ್ ಸ್ಪರ್ಧಿಸಿ 14,546 ಮತಗಳ ಅಂತರದಲ್ಲಿ ಜಯ ಗಳಿಸುತ್ತಾರೆ. ಈ ಬಾರಿಯೂ ಸಚಿವ ಸ್ಥಾನ ಒಲಿದು ಬರುತ್ತದೆ. ತೋಟಗಾರಿಕೆ ಖಾತೆ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡುತ್ತಾರೆ. ಆದರೆ 1989ರಲ್ಲಿ ನಡೆಯುವ ಚುನಾವಣೆಯಲ್ಲಿ ಸೋಲು ಕಾಣುತ್ತಾರೆ. 1994ರಲ್ಲಿ ಜನತಾದಳದ ಒಮ್ಮತದ ಅಭ್ಯರ್ಥಿ ಕಣಕ್ಕಿಳಿದು 36,373 ಮತಗಳನ್ನು ಪಡೆದು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗುವುದರ ಜತೆಗೆ ಉನ್ನತ ಶಿಕ್ಷಣ ಸಚಿವರಾಗುತ್ತಾರೆ. 1999ರಲ್ಲಿ ಸಂಯುಕ್ತ ಜನತಾದಳದಿಂದ ಸ್ಪರ್ಧಿಸಿ 5,281 ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಕ್ಷೇತ್ರದಲ್ಲಿ ತಮ್ಮದೇ ಆದ ಮತಬ್ಯಾಂಕ್ ಹೊಂದಿರುವ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಚುನಾವಣಾ ಹೊಸ್ತಿಲಿನಲ್ಲಿ ಬಿಜೆಪಿಗೆ ಹಿನ್ನಡೆಯದಂತಾಗಿದೆ. 2018ರ ಚುನಾವಣೆಯಲ್ಲಿ ಬಿಜೆಪಿ ಒಳಬೇಗುದಿ ನಡುವೆಯೂ 10808 ಮತಗಳನ್ನು ಪಡೆದಿದ್ದರು.