ಜಿಲ್ಲೆ

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿಗಳ ನಕಲಿ ದಾಖಲೆ ಸೃಷ್ಟಿ

ಮಂಜುನಾಥ ಗದಗಿನ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿಗಳ ನಕಲಿ ದಾಖಲೆ ಸೃಷ್ಟಿಸಿ ಅನ್ಯರಿಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳೂ ಭಾಗಿಯಾಗಿರುವ ಮೂರು ಪ್ರಕರಣಗಳ ಪತ್ತೆಯಾಗಿವೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾನೂನು ಪ್ರಕಾರ ದರೋಡೆ ನಡೆಯುತ್ತಿದ್ದು, ಜನಸಾಮಾನ್ಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಾರ್ತಿಕ ಅಂತ್ಯ ಹಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಭೂ ದಾಖಲೆಗಳ ನಿರ್ದೇಶಕರ ಕಚೇರಿಗಳಿಂದ ವರ್ಷಗಳಿಂದ ಅರ್ಜಿಗಳು ವಿಲೇವಾರಿ ಆಗಿಲ್ಲ. ಜನಸಾಮಾನ್ಯರು ನಿತ್ಯ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಗೋಕಾಕ ನಗರದ ಅಧಿಕಾರಿಗಳ ಕರ್ತವ್ಯವನ್ನು ಅನ್ಯ ವ್ಯಕ್ತಿಗಳು ಮಾಡುತ್ತಿದ್ದಾರೆ. ಕಾನೂನು ಬಾಹಿರವಾಗಿ ಸಿಬ್ಬಂದಿ ನಿಯೋಜನೆ ಮಾಡಿಕೊಂಡಿದ್ದಾರೆ. 3000 ಅರ್ಜಿಗಳು ವರ್ಷದಿಂದ ವಿಲೇವಾರಿ ಆಗದೆ ಬಾಕಿ ಉಳಿದುಕೊಂಡಿವೆ. ಈ ವ್ಯವಸ್ಥೆ ಸರಿಪಡಿಸಬೇಕು ಎಂದರು.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕಾಮಗಾರಿಗಿಂತ ಹೆಚ್ಚು ಅನುದಾನ ಖರ್ಚು ಮಾಡಿರುವುದು, ಕಳಪೆ ಮಾಡಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ. ಮಹಾನಗರ ಪಾಲಿಕೆಯ ಯೋಜನಾ, ಕಂದಾಯ ಸೇರಿ ವಿವಿಧ ವಿಭಾಗಗಳಲ್ಲಿ ಪರಿಶೀಲನೆ ವೇಳೆ ಸಾಕಷ್ಟು ಪ್ರಮಾಣದಲ್ಲಿ ಅವ್ಯವಹಾ ಕಂಡು ಬಂದಿದೆ. ಸಾರ್ವಜನಿಕರ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಹೀಗಾಗಿ ಈ ಕುರಿತು ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಲೋಕಾಯುಕ್ತ ಕಚೇರಿ ಸಿಬ್ಬಂದಿ ಕೊರತೆ: ವರ್ಷದಿಂದ ವರ್ಷದಕ್ಕೆ ಭ್ರಷ್ಟಾಚಾರ ಕೇಸ್‌ಗಳು ಹೆಚ್ಚುತ್ತಿವೆ. ಆದರೆ, ನಿಗದಿತ ಅವಧಿಯಲ್ಲಿ ಪ್ರಕರಣಗಳ ತನಿಖೆ ಕೈಗೊಳ್ಳಲು ಸಿಬ್ಬಂದಿ ಕೊರತೆ ಎದುರಿಸುತ್ತಿದ್ದೇವೆ. ಕೆಲ ಜಿಲ್ಲೆಗಳಿಗೆ ಲೋಕಾಯುಕ್ತ ಎಸ್‌ಪಿಗಳು ನೇಮಕಗೊಂಡಿಲ್ಲ. ಸಿಬ್ಬಂದಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಬೇಡಿಕೆಗೆ ಅನುಗುಣವಾಗಿ ಸರ್ಕಾರ ಸಿಬ್ಬಂದಿ ನೀಡುತ್ತಿಲ್ಲ. ಮಹಾನಗರ ಪಾಲಿಕೆಯಿಂದ ಲೋಕಾಯುಕ್ತದಲ್ಲಿ ಯಾವುದೇ ಕೇಸ್‌ಗಳನ್ನು ದಾಖಲಾಗಿಲ್ಲ. ಸಾಮಾನ್ಯ ಜನರಂತೆ ದೂರು ಕೊಟ್ಟರೆ ಪ್ರಯೋಜನ ಇಲ್ಲ. ನಿಯಮ ಪ್ರಕಾರ ಕೇಸ್ ದಾಖಲಿಸಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ತಿಳಿಸಿದರು.