ತಿ.ನರಸೀಪುರ: ಜಾತಿ ಮತ್ತು ಧರ್ಮದ ಭೇದ ಭಾವ ಇಲ್ಲದೆ ಎಲ್ಲ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುವ ಬಿ.ಮನ್ಸೂರ್ ಆಲಿ ಅವರದ್ದು ಭಾತೃತ್ವ ತುಂಬಿದ ಸಾಮರಸ್ಯದ ವ್ಯಕ್ತಿತ್ವ ಎಂದು ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆಯ ಮಾತನಾಡಿದ್ದಾರೆ.
ತಾಲೂಕಿನ ವಾಟಾಳು ಗ್ರಾಮದಲ್ಲಿರುವ ಶ್ರೀ ಸೂರ್ಯ ಸಿಂಹಾಸನ ಮಠದಲ್ಲಿ ಸೋಮವಾರ ಜಾಗತಿಕ ಸಾಧಕರ ಮಂಡಳಿ ವತಿಯಿಂದ ದೆಹಲಿಯಲ್ಲಿ ಸಮಾಜ ಸೇವೆಗೆ ಗೌರವ ಡಾಕ್ಟರೇಟ್ ಪಡೆದ ಹಿರಿಯ ಮುಖಂಡ ಬಿ.ಮನ್ಸೂರ್ ಅಲಿ ಅವರನ್ನು ಸನ್ಮಾನಿಸಿ ಮಾತನಾಡಿ, ಸಂಘರ್ಷ ರಹಿತವಾಗಿ ಎಲ್ಲರೂಟ್ಟಿಗೆ ಬೆರೆಯುವ ಅಜತಶತ್ರುಗುಣ ಇತರರಿಗೆ ಮಾದರಿಯಾಗಿದೆ ಎಂದರು.
ಸೌತ್ ವೆಸ್ಟರ್ನ್ ಅಮೆರಿಕನ್ ಯುನಿವರ್ಸಿಟಿ ಹಾಗೂ ಗ್ಲೋಬಲ್ ಅಚೀವರ್ಸ್ ಕೌನ್ಸಿಲ್ ಅವಾರ್ಡ್ ವತಿಯಿಂದ ಮುಸ್ಲಿಂ ಸಮುದಾಯದ ಮುಖಂಡರಾದ ಕೆಪಿಸಿಸಿ ಅಲ್ಪಸಂಖ್ಯಾತರ ಕಾರ್ಯದರ್ಶಿ ಬಿ.ಮನ್ಸೂರ್ ಆಲಿ ಅವರಿಗೆ ಡಾಕ್ಟರ್ ಆಫ್ ಸೋಷಿಯಲ್ ವರ್ಕ್ ಬಿರುದನ್ನು ನೀಡಿ ಗೌರವಿಸಲಾಗಿದೆ. ಇದು ಹೆಮ್ಮೆಯ ವಿಚಾರವಾಗಿದೆ ಎಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮಠದ ಕಿರಿಯ ಶ್ರೀಗಳಾದ ಶಿವಕುಮಾರ ಸ್ವಾಮೀಜಿ, ಶ್ರೀಗಳ ಆಪ್ತ ಸಹಾಯಕ ಕುಮಾರ ಹಾಗೂ ಹಿರಿಯ ಮುಖಂಡ ಅಕ್ಬರ್ ಪಾಷ ಇದ್ದರು.