ಬೆಂಗಳೂರು: ಯಾವುದೇ ಪ್ರಶಸ್ತಿಗಳಿಗೆ ಆರ್ಹರನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸ ಎಂದು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಅಭಿಪ್ರಾಯಪಟ್ಟರು.
ಬಿ.ಎಂ.ಶ್ರೀ ಪ್ರತಿಷ್ಟಾನ ವತಿಯಿಂದ ನಗರದ ಬಿ.ಎಂ.ಶ್ರೀ ಕಲಾಭವನದ ಎಂ.ವಿ.ಸೀ. ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮದಲ್ಲಿ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅವರಿಗೆ ‘ಸಾವಿತ್ರಮ್ಮ ಪ್ರೊ. ಎಂ.ವಿ.ಸೀತಾರಾಮಯ್ಯ ಸಾಂಸ್ಕೃತಿಕ ಸಂಘಟಕ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
ಬಹಳಷ್ಟು ಸಂದರ್ಭಗಳಲ್ಲಿ ಪ್ರಶಸ್ತಿಗಳು ಅನರ್ಹರ ಕೈ ಸೇರುತ್ತದೆ. ಆದರೆ ಸಾಂಸ್ಕೃತಿಕ ಸಂಘಟಕ ಪ್ರಶಸ್ತಿ ಗೆ ಈ ಬಾರಿಯ ಆಯ್ಕೆ ಉತ್ತಮವಾಗಿದ್ದು, ಶ್ರೀನಿವಾಸ ಜಿ. ಕಪ್ಪಣ್ಣ ಅವರಿಗೆ ಈ ಪ್ರಶಸ್ತಿ ದೊರೆತಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.
ಶ್ರೀನಿವಾಸ ಜಿ.ಕಪ್ಪಣ್ಣನವರು ತನ್ನ ಇಡೀ ಜೀವನವನ್ನು ರಂಗಭೂಮಿ ಸೇರಿ ಕಲಾ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ. ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಯ ಕಲಾವಿದರ ನಡುವೆ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯ, ಸಿನಿಮಾ, ರಂಗಭೂಮಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಇವರು, ಗಿರೀಶ್ ಕಾರ್ನಾಡ್, ಕಾರಂತರ ಸಾಲಿನಲ್ಲಿ ನಿಲ್ಲುವಂತಹ ರಾಜ್ಯದ ಹಿರಿಮೆ ಎಂದು ಹೊಗಳಿದರು.
ಕಾರ್ಯಕ್ರಮದಲ್ಲಿ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ, ಗೌರವಾಧ್ಯಕ್ಷ ಡಾ. ಆರ್.ಲಕ್ಷ್ಮೀನಾರಾಯಣ ಇತರರು ಇದ್ದರು.