ಜಿಲ್ಲೆ

ಬಿ ಖಾತಾ ಆಂದೋಲನ ಕಣ್ಣೊರೆಸುವ ತಂತ್ರ: ವಿನಯ್ ಕುಮಾರ್ ಕಂದಡ್ಕ ಆರೋಪ

Avinash R

ಸುಳ್ಯ: ನಗರಗಳಲ್ಲಿ ಎಲ್ಲ ನಿವೇಶನಗಳಿಗೆ ಎ ಖಾತಾ ಹಾಗೂ ಬಿ ಖಾತಾ ಎಂದು ವರ್ಗಿಕರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿ ತರಾತುರಿಯಲ್ಲಿ ಬಿ ಖಾತಾ ನೀಡಲು ಆಂದೋಲನಕ್ಕೆ ಆದೇಶ ನೀಡಿರುವುದು ಜನರ ಕಣ್ಣೊರೆಸುವ ತಂತ್ರವಾಗಿದೆ. ಇದರ ಒಳತಂತ್ರ ಖಾಲಿಯಾಗಿರುವ ಸರ್ಕಾರದ ಖಜಾನೆ ತುಂಬಲು ಇನ್ನೊಂದು ಮಾರ್ಗವಷ್ಟೇ ಆಗಿದೆ ಎಂದು ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ವಿನಯ್ ಕುಮಾರ್ ಕಂದಡ್ಕ ಟೀಕಿಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಜನಗಳಿಗೆ ಖಾತ ನೀಡುವ ಸಮಸ್ಯೆ ರಾಜ್ಯದಲ್ಲಿದ್ದು ಇದಕ್ಕೆ ಸೂಕ್ತ ನಿಯಮಗಳನ್ನು ರೂಪಿಸದೆ, ಅಕ್ರಮ- ಸಕ್ರಮ ಕಾನೂನಿನ ಕುರಿತ ವ್ಯಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗ ಜನಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುವ ಬದಲಾಗಿ ಕೇವಲ ಬಿ ಖಾತಾ ನೀಡುವ ಮೂಲಕ ತಾತ್ಕಾಲಿಕ ಪರಿಹಾರ ನೀಡಿ ಜನಸಾಮಾನ್ಯರನ್ನು ಮರಳುಗೊಳಿಸುವ ನೀತಿ ಸರಿಯಲ್ಲ. ಅನಧಿಕೃತ ನಿವೇಶನಗಳಿಗೆ ಬಿ ಖಾತಾ ನೀಡುವ ಪದ್ಧತಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಹಿಂದಿನಿಂದಲೂ ಇದೆ. ಇದು ಕೇವಲ ಆಸ್ತಿ ಮಾರಾಟಕ್ಕೆ ಮಾತ್ರ ಅನುಕೂಲವೇ ಹೊರತು ಶಾಶ್ವತ ಪರಿಹಾರ ಅಲ್ಲ. ಇಂಥ ನಿವೇಶನಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರಗಳ ಅನುಮತಿ ಇರುವುದಿಲ್ಲ. ವಿನ್ಯಾಸ ಅನುಮೋದನೆಗೊಳ್ಳದ ನಿವೇಶನಗಳಿಗೆ ಬ್ಯಾಂಕ್ ಸಾಲ ಲಭ್ಯವಾಗುವುದಿಲ್ಲ ಎಂದು ತಿಳಿಸಿದರು.