ತುಮಕೂರು: ಅನಧಿಕೃತ ಖಾತೆಗಳನ್ನು ನೋಂದಣಿ ಮಾಡಿಕೊಳ್ಳಲು ನಗರ ಪಾಲಿಕೆಯು ಬಿ-ಖಾತಾ ಆಂದೋಲನ ಆರಂಭಿಸಿದೆ. ಅನಧಿಕೃತ ಆಸ್ತಿಗಳನ್ನು "ಬಿ' ರಿಜಿಸ್ಟರ್ನಲ್ಲಿ ದಾಖಲಿಸಿ ಇ-ಆಸ್ತಿ ನಮೂನೆ-2ಎ ಸೃಜಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು ನಗರದ 35 ವಾರ್ಡ್ಗಳ ಆಸ್ತಿ ಮಾಲೀಕರು 11 ಕಡೆ ಅರ್ಜಿ ಸಲ್ಲಿಸಲುವ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ಮಾಡಿದೆ.
ನಗರದ ಶಿರಾಗೇಟ್ನ ಐಡಿಎಸ್ಎಂಟಿ ಕಾಂಪ್ಲೆಕ್ಸ್ನಲ್ಲಿ ಗುರುವಾರ ನಗರ ಪಾಲಿಕೆಯಿಂದ ಹಮ್ಮಿಕೊಂಡಿದ್ದ 1, 2 ಹಾಗೂ 3ನೇ ವಾರ್ಡ್ ವ್ಯಾಪ್ತಿಯ ಬಿ ಖಾತೆ ಆಂದೋಲನದಲ್ಲಿ ಆಸ್ತಿ ಮಾಲೀಕರಿಗೆ ಅರ್ಜಿ ವಿತರಿಸಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಈ ಕಾರ್ಯದಲ್ಲಿ ಸಾರ್ವಜನಿಕರ ಜತೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಮಾನವೀಯತೆಯಿಂದ ವರ್ತಿಸಿ ತೊಂದರೆ ಆಗದಂತೆ ನಡೆದುಕೊಳ್ಳಿ, ಜನರಿಗೆ ಕಿರುಕುಳ ನೀಡಿದರೆ ನೀವು ನರಕಕ್ಕೆ ಹೋಗುವಿರಿ ಎಂದು ಎಚ್ಚರಿಕೆ ನೀಡಿದರು.
ಕಟ್ಟಡ ಹಾಗೂ ನಿವೇಶನ ಮಾಲೀಕರು ಬಿ -ಖಾತೆ ಮಾಡಿಸಿ ಆಸ್ತಿ ದಾಖಲಾತಿ ಗೊಂದಲ ನಿವಾರಿಸಿಕೊಳ್ಳಿ. ತಮ್ಮ ಆಸ್ತಿಯನ್ನು ತೆರಿಗೆ ವ್ಯಾಪ್ತಿಗೆ ತಂದು ಅಧಿಕೃತಗೊಳಿಸಿಕೊಳ್ಳಬೇಕು. ಇದರಿಂದ ತೆರಿಗೆ ಹಣ ಸೋರಿಕೆಯಾಗುವುದು ತಪ್ಪಿ ಸರ್ಕಾರಕ್ಕೆ ಹಾಗೂ ನಗರಪಾಲಿಕೆಗೆ ಬಂದು ನಿಮ್ಮ ತೆರಿಗೆ ಹಣ ನಗರದ ಅಭಿವೃದ್ಧಿ ಕೆಲಸಗಳಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.
ಬಿ-ಖಾತೆ ಆಂದೋಲನದ ನೆಪದಲ್ಲಿ ಪಾಲಿಕೆ ಅಧಿಕಾರಿಗಳು ನಾಗರೀಕರಿಗೆ ತೊಂದರೆ ಕೊಡಬಾರದು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಇಲ್ಲಸಲ್ಲದ ನೆಪ ಹೇಳಿ ಜನರನ್ನು ಅಲೆದಾಡಿಸಿ ಹೈರಾಣಾಗಿಸಬಾರದು. ಸಾರ್ವಜನಿಕರು ಅಗತ್ಯ ದಾಖಲಾತಿಗಳನ್ನು ಒದಗಿಸಿ ಬಿ-ಖಾತೆ ಆಂದೋಲನವನ್ನು ಸದುಪಯೋಗಪಡಿಸಿಕೊಂಡು ತಮ್ಮ ಆಸ್ತಿ ಮಾಲಿಕತ್ವವನ್ನು ಅಧಿಕೃತಗೊಳಿಸಿಕೊಳ್ಳುವಂತೆ ಸಲಹೆ ನೀಡಿದರು.
ಆಸ್ತಿದಾರರು 2024, ಸೆ.10ಕ್ಕಿಂತ ಮೊದಲು ಉಪನೋಂದಣಿ ಕಚೇರಿಯಲ್ಲಿ ನೋಂದಣಿಯಾಗಿರುವವರು ಮಾತ್ರ ಬಿ -ಖಾತೆ ಮಾಡಿಸಲು ಅರ್ಹರಿರುತ್ತಾರೆ. ಬಿ- ಖಾತಾದಲ್ಲಿ ದಾಖಲಾಗುವ ಆಸ್ತಿಗಳಿಗೆ ಮೊದಲ ಬಾರಿಗೆ ಸ್ವತ್ತುಗಳ ತೆರಿಗೆಯ ಶೇ.2ರಷ್ಟು ತೆರಿಗೆಯನ್ನು ಹಾಗೂ ನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸಲಾಗುತ್ತದೆ ಎಂದರು.
ವಲಯ ಆಯುಕ್ತ ಶಿವಾನಂದ್, ಕಂದಾಯ ನಿರೀಕ್ಷಕ ವಸಂತಕುಮಾರ್, ಪಾಲಿಕೆ ಮಾಜಿ ಸದಸ್ಯರಾದ ಎನ್.ಮಹೇಶ್, ಇಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ನಗರ ವ್ಯಾಪ್ತಿಯಲ್ಲಿ ಅನದಿಕೃತ ಆಸ್ತಿಗಳನ್ನು ಹೊಂದಿರುವವರು ಬಿ-ಖಾತೆ ದಾಖಲಿಸಲು 3 ತಿಂಗಳ ಕಾಲಾವಕಾಶ ನೀಡಲಾಗಿದೆ. ವಾರ್ಡ್ಗಳನ್ನು ವಿಂಗಡಣೆ ಮಾಡಿ 11 ಕಡೆ ಅರ್ಜಿ ಸಲ್ಲಿಸಲು ಆಸ್ತಿ ಮಾಲಿಕರಿಗೆ ವ್ಯವಸ್ಥೆ ಮಾಡಲಾಗಿದೆ. ಬಿ -ಖಾತೆ ದಾಖಲಿಸಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರ, ವಿಭಾಗ ಪತ್ರಗಳನ್ನು ಹೊಂದಿರಬೇಕು. ಬಿ.ವಿ.ಅಶ್ವಿಜ ಪಾಲಿಕೆ ಆಯುಕ್ತೆ
ಬಿ ಖಾತಾ ಅರ್ಜಿ ಸಲ್ಲಿಕೆ ಸ್ಥಳ ವಾರ್ಡ್ ಸಂಖ್ಯೆ ಸ್ಥಳ ದಿನಾಂಕ 1,2,3 ಐಡಿಎಸ್ಎಂಟಿ ಕಾಂಪ್ಲೆಕ್ಸ್, ಶಿರಾಗೇಟ್ ಫೆ.20, 21 4,5,6 ಪೂರ್ಣಯ್ಯಛತ್ರ, ಚಿಕ್ಕಪೇಟೆ ಫೆ.20, 21 7,8,9,11 ಆಜಾದ್ ಪಾರ್ಕ್, ಪಿಎಚ್ ಕಾಲನಿ ಫೆ.27, 28 10,14,15,23, 29 ವಾಲ್ಮೀಕಿ ಸಮುದಾಯಭವನ, ಮರಳೂರು ಫೆ.27, 28 12,13,17,22 ಮಹಾನಗರ ಪಾಲಿಕೆ ಆವರಣ ಮಾ.3, 4 16,18,19,20 ಸರ್ಕಾರಿ ಶಾಲೆ, ಕೊತಿತೋಪು ಮಾ.3, 4 24,25,26,27 ಆಜಾದ್ ಪಾರ್ಕ್, ಅಶೋಕನಗರ ಮಾ.6, 7 21,28 ಕೊಲ್ಹಾಪುರದಮ್ಮ ದೇವಸ್ಥಾನ, ಹನುಮಂತಪುರ ಮಾ.6, 7 33,34 ಪಾಲಿಕೆ ಪಂಪ್ಹೌಸ್, ಸಿಎಂ ಬಡಾವಣೆ ಮಾ.11, 12 30,31 ಮಾರುತಿನಗರ ಪಾರ್ಕ್ ಮಾ.11, 12 32, 35 ಬಸವಭವನ, ಸಿದ್ದರಾಮೇಶ್ವರ ಬಡಾವಣೆ ಮಾ.14