ಜಿಲ್ಲೆ

ಮೈಸೂರಿನಲ್ಲಿ ಬಿ ಖಾತಾ ಅಭಿಯಾನಕ್ಕೆ ಚಾಲನೆ

ಸದೇಶ್ ಕಾರ್ಮಾಡ್

ಮೈಸೂರು: ನಗರ ಪಾಲಿಕೆಯಲ್ಲಿ ಶನಿವಾರ ಬಿ ಖಾತಾ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಚಾಲನೆ ನೀಡಿದರು. ಈ ಅಭಿಯಾನದಡಿಯಲ್ಲಿ ನಗರದ 25,475 ಅನಧಿಕೃತ ಆಸ್ತಿಗಳ ಮಾಲೀಕರಿಗೆ ಬಿ ಖಾತೆ ನೀಡುವ ಗುರಿ ಹೊಂದಲಾಗಿದೆ. ಅಭಿಯಾನವು ಮೇ 10ರವರೆಗೆ ನಡೆಯಲಿದೆ.

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಲಯ ಕಚೇರಿ 1ರಲ್ಲಿ ಒಟ್ಟು 2126 ಅನಧಿಕೃತ ಆಸ್ತಿಗಳನ್ನು ಗುರುತಿಸಲಾಗಿದೆ. ಅದೇ ರೀತಿ ವಲಯ ಕಚೇರಿ 2ರಲ್ಲಿ 1709, 3ರಲ್ಲಿ 801, 9ರಲ್ಲಿ 754 ಸೇರಿದಂತೆ ಒಟ್ಟು 5,390 ಆಸ್ತಿಗಳು, ಚಾಮರಾಜ ಕ್ಷೇತ್ರದ ವಲಯ ಕಚೇರಿ 4ರ ವ್ಯಾಪ್ತಿಯಲ್ಲಿ 168, 5ರಲ್ಲಿ 4079 ಸೇರಿದಂತೆ ಒಟ್ಟು 4247 ಆಸ್ತಿಗಳು, ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ವಲಯ ಕಚೇರಿ 7ರ ವ್ಯಾಪ್ತಿಯಲ್ಲಿ 1225, 8ರಲ್ಲಿ 6458, 9ರಲ್ಲಿ 6904 ಸೇರಿದಂತೆ ಒಟ್ಟು 14,587 ಆಸ್ತಿಗಳು, ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ವಲಯ ಕಚೇರಿ 3ರಲ್ಲಿ 1251 ಅನಧಿಕೃತ ನಿವೇಶನಗಳನ್ನು ಗುರುತಿಸಲಾಗಿದೆ. ಒಟ್ಟಾರೆ ನಗರದಲ್ಲಿ 25,475 ಅನಧಿಕೃತ ಆಸ್ತಿಗಳು ಇವೆ.

1 ಲಕ್ಷಕ್ಕೂ ಹೆಚ್ಚು ನಿವೇಶನಗಳು: ಶಾಸಕ ತನ್ವೀರ್ ಸೇಠ್ ಮಾತನಾಡಿ, ನೋಂದಾಯಿತ ಮಾರಾಟ ಪತ್ರಗಳು, ದಾನಪತ್ರ, ವಿಭಾಗ ಪತ್ರಗಳು ಅಥವಾ ಹಕ್ಕು ಖುಲಾಸೆ ಪತ್ರಗಳು ಇರುವವರಿಗೆ ಮಾತ್ರ ಮಾತ್ರ ಬಿ ಖಾತೆ ನೀಡಲು ನಿರ್ದೇಶನ ನೀಡಿದೆ. ಸರ್ಕಾರದ ಮಾರ್ಗಸೂಚಿಯ ಪ್ರಕಾರ ನಗರ ಪಾಲಿಕೆ 25,457 ಅನಧಿಕೃತ ನಿವೇಶನಗಳನ್ನು ಗುರುತಿಸಿ ಬಿ ಖಾತೆ ನೀಡಲು ಮುಂದಾಗಿದೆ. ಆದರೆ, ನಗರದಲ್ಲಿ 29 ಅನಧಿಕೃತ ಬಡಾವಣೆಗಳಲ್ಲಿ 1 ಲಕ್ಷ ಕ್ಕೂ ಹೆಚ್ಚು ಅನಧಿಕೃತ ನಿವೇಶನಗಳು ಇದ್ದು, ಈ ಎಲ್ಲ ನಿವೇಶನಗಳ ಮಾಲೀಕರಿಗೆ ಬಿ ಖಾತೆ ನೀಡಲು ಕ್ರಮ ವಹಿಸಬೇಕಾಗಿದೆ. ಹಾಗಾಗಿ ನೋಂದಾವಣೆ ಅಗದೆ ಇರುವ ನಿವೇಶನಗಳಿಗೂ ಬಿ ಖಾತೆ ನೀಡಲು ಸರ್ಕಾರ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಗಮನ ಸೆಳೆದರು.

ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಎಲ್ಲ ಅನಧಿಕೃತ ಬಡಾವಣೆಗಳಿಗೆ ನಗರ ಪಾಲಿಕೆಯು ಈಗಾಗಲೇ ರಸ್ತೆ, ಕುಡಿಯುವ ನೀರು, ಒಳಚರಂಡಿ, ಬೀದಿ ದೀಪದ ಸೌಲಭ್ಯಗಳನ್ನು ಕಲ್ಪಿಸಿದೆ. ಅನಧಿಕೃತ ಬಡಾವಣೆಗಳ ನಿವಾಸಿಗಳು ಸಹ ಸಾಕಷ್ಟು ವರ್ಷಗಳಿಂದ ಪಾಲಿಕೆಗೆ ತೆರಿಗೆ ಪಾವತಿಸುತ್ತಾ ಬರುತ್ತಿದ್ದಾರೆ. ಹಾಗಾಗಿ ಎಲ್ಲರಿಗೂ ಬಿ ಖಾತೆ ನೀಡಲು ಕ್ರಮ ವಹಿಸಬೇಕಾಗಿದೆ ಎಂದರು.

ಬಿ ಖಾತಾ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಜನರ ಅನುಕೂಲಕೋಸ್ಕರ ರಾಜ್ಯ ಸರ್ಕಾರ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಾಣವಾಗಿರುವ ನಿವೇಶನಗಳಿಗೆ ಬಿ ಖಾತೆ ನೀಡುವ ಅಭಿಯಾನ ಆರಂಭಿಸಿದೆ. ಈ ಅಭಿಯಾನವು ಮೇ 10ರವರೆಗೆ ನಡೆಯಲಿದ್ದು, ಜನರು ಅಭಿಯಾನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅಭಿಯಾನದ ಸೌಲಭ್ಯ ಫಲಾನುಭವಿಗಳಿಗೆ ಸುಲಭವಾಗಿ ತಲುಪಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಹಾವಳಿಗೆ ಅವಕಾಶ ಕಲ್ಪಿಸಬಾರದು. ಒಂದುವೇಳೆ ಮಧ್ಯವರ್ತಿಗಳ ಹಾವಳಿ ಕಂಡು ಬಂದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿದರು.

ವೇದಿಕೆಯಲ್ಲಿ ಶಾಸಕ ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಡಾ. ಡಿ.ತಿಮ್ಮಯ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ, ನಗರ ಪಾಲಿಕೆ ಉಪ ಆಯುಕ್ತ ಜಿ.ಎಸ್.ಸೋಮಶೇಖರ್ ಹಾಗೂ ಇತರರು ಇದ್ದರು.

ರಾಜ್ಯ ಸರ್ಕಾರ ಬಿ ಖಾತೆ ನೀಡಲು ಕೈಗೊಂಡಿರುವ ತೀರ್ಮಾನದಿಂದ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗಲಿದೆ. ಪ್ರಸ್ತುತ ನೋಂದಾಯಿತ ದಾಖಲೆ ಇರುವವರೆಗೆ ಮಾತ್ರ ಬಿ ಖಾತೆ ನೀಡಲಾಗುತ್ತಿದೆ. ಇದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗುವುದಿಲ್ಲ. ಹಾಗಾಗಿ ವಿದ್ಯುತ್ ಹಾಗೂ ನೀರಿನ ಬಿಲ್‌ಅನ್ನು ಸಹ ದಾಖಲೆಯಾಗಿ ಪರಿಗಣಿಸಿ ಬಿ ಖಾತೆ ನೀಡಬೇಕು. ಕೆಲವು ವಲಯ ಕಚೇರಿಗಳಲ್ಲಿ ಜನರಿಗೆ ಲಂಚಕೋಸ್ಕರ ಕಿರುಕುಳ ನೀಡಲಾಗುತ್ತಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.

ಟಿ.ಎಸ್.ಶ್ರೀವತ್ಸ, ಶಾಸಕ

ಒಂದು ವರ್ಷದಲ್ಲಿ ಇ-ಆಸ್ತಿ ಪೂರ್ಣ

ಕಳೆದ ಒಂದು ತಿಂಗಳ ಅವಧಿಯಲ್ಲಿ 9 ಸಾವಿರ ಇ ಆಸ್ತಿ ನೀಡಲಾಗಿದ್ದು, ಇದೇ ವೇಗದಲ್ಲಿ ಮುಂದುವರೆದರೆ ಒಂದೂವರೆ ವರ್ಷದೊಳಗೆ ನಗರದ ಎಲ್ಲ ಆಸ್ತಿಗಳಿಗೆ ಇ-ಆಸ್ತಿ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಹೇಳಿದರು. ಇ-ಆಸ್ತಿ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಬಹುದು. ಆದರೆ, ಅದಕ್ಕೆ ಮಾನವ ಸಂಪನ್ಮೂಲ, ಕಂಪ್ಯೂಟರ್, ಸ್ಕಾೃನ್‌ಗಳ ಅವಶ್ಯಕತೆ ಇದೆ. ಈಗ ಇರುವ ಮಾನವ ಸಂಪನ್ಮೂಲ ಬಳಸಿಕೊಂಡು ಅತ್ಯಂತ ವೇಗವಾಗಿ ಇ-ಆಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.

ಬಿ ಖಾತೆಗೆ ಸಲ್ಲಿಸಬೇಕಾದ ದಾಖಲೆಗಳೇನು?

* ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸಲು 10-9-2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು, ದಾನಪತ್ರ, ವಿಭಾಗ ಪತ್ರಗಳು ಅಥವಾ ಹಕ್ಕು ಖುಲಾಸೆ ಪತ್ರಗಳು

* ಪ್ರಸಕ್ತ ಸಾಲಿನವರೆಗೆ ಋಣಭಾರ ರಾಹಿತ್ಯ ಪ್ರಮಾಣ ಪತ್ರ

* ಚಾಲ್ತಿ ಸಾಲಿನವರೆಗೆ ಆಸ್ತಿ ತೆರಿಗೆ ಪಾವತಿ ರಸೀದಿ

* ಸ್ವತ್ತಿನ ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ

*ಸ್ವತ್ತಿನ ಮಾಲೀಕರ ಗುರುತಿನ ದಾಖಲೆ ಪ್ರತಿ