ಜಿಲ್ಲೆ

ಆಂತರಿಕ ಪರಿಪುಯರ್ಣತೆಗೆ ಗಮನಕೊಡಿ,ಆಧ್ಯಾತ್ಮಿಕ ಮಾರ್ಗದರ್ಶಕಿ ಬಿ ಕೆ ಶಿವಾನಿ ಉಪನ್ಯಾಸ

Dharwada - Basavaraj Idli

ಹುಬ್ಬಳ್ಳಿ: ಮನುಷ್ಯ ತನ್ನ ಬಾಹ್ಯ ಜಗತ್ತಿನಲ್ಲಿ ಮಾತ್ರ ಎಲ್ಲವೂ ಸರಿಯಾಗಿ ಪರಿಪೂರ್ಣವಾಗಿ ಇರಬೇಕು ಎಂದು ಬಯಸುತ್ತಿದ್ದಾನೆಯೇ ಹೊರತು, ಆಂತರಿಕವಾಗಿ ತಾನು ಮೊದಲು ಪರಿರ್ಪೂಣನಾಗಬೇಕೆಂದು ಆಲೋಚನೆ ಮಾಡುತ್ತಿಲ್ಲ, ಇದೇ ಕಾರಣಕ್ಕೆ ಆತನ ಜೀವನದಲ್ಲಿ ಒತ್ತಡಗಳು ಆವರಿಸುತ್ತಿವೆ ಎಂದು ಆಧ್ಯಾತ್ಮಿಕ ಮಾರ್ಗದರ್ಶಕಿ, ಪ್ರೇರಕ ಭಾಷಣಕಾರರಾದ ಬಿ.ಕೆ. ಶಿವಾನಿ ಹೇಳಿದರು.

ಇಲ್ಲಿಯ ಭೈರಿದೇವರಕೊಪ್ಪ ಗಾಮನಗಟ್ಟಿ ರಸ್ತೆಯಲ್ಲಿರುವ ಭಗವದ್ಗೀತಾ ಜ್ಞಾನಲೋಕ ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ "ಒತ್ತಡರಹಿತ ಆನಂದದಾಯಕ ಜೀವನ' ಕುರಿತ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಕಳೆದ 20- 30 ವರ್ಷದಲ್ಲಿ ಜಗತ್ತಿನಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಅನೇಕ ಸವಲತ್ತುಗಳು ನಮ್ಮ ಸಹಾಯಕ್ಕೆ ಬಂದಿವೆ. ಮನೆಯಲ್ಲಿ ಕೆಲಸ, ಕಾರ್ಯ ಸುಗಮಗೊಳಿಸುವ ಹಲವು ಯಂತ್ರಗಳು ಬಂದಿವೆ. ಕ್ಷಣ ಮಾತ್ರದಲ್ಲಿ ದೂರದ ದೇಶದಲ್ಲಿರುವ ಆತ್ಮೀಯರಿಗೆ ಸಂದೇಶ ಕಳಿಸಬಹುದಾಗಿದೆ. ಇಂತಹ ಸವಲತ್ತುಗಳಿಂದಾಗಿ ನಮ್ಮ ಒತ್ತಡಗಳು ಕಡಿಮೆಯಾಗಬೇಕಿತ್ತು. ಆದರೆ, ಹಾಗೆ ಆಗಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ಮನಸ್ಸು ಎಂದು ಪ್ರತಿಪಾದಿಸಿದರು.

ಶಾಲೆ, ಕಾಲೇಜುಗಳಲ್ಲಿ ಇಂದು ಎಲ್ಲವನ್ನೂ ಕಲಿಸುತ್ತಿದ್ದಾರೆ. ಬದುಕು ಕಲಿಸಲೆಂದೇ ಎಷ್ಟೋ ವಿಶ್ವವಿದ್ಯಾಲಯಗಳು ಸಹ ಹುಟ್ಟಿಕೊಂಡಿವೆ. ಬಹುತೇಕ ಕಡೆಗಳಲ್ಲಿ ಮನಸ್ಸು ಕೇಂದ್ರಿಕರಿಸುವುದನ್ನು ಮಾತ್ರ ಹೇಳಿಕೊಡುತ್ತಿಲ್ಲ. ಮಕ್ಕಳಿಗೆ ಏಕಾಗ್ರತೆ ಮೊದಲು ಕಲಿಸಬೇಕು. ಪ್ರತಿಯೊಬ್ಬರು ತಮ್ಮ ತಮ್ಮ ಮನಸ್ಸಿಗೆ ತರಬೇತಿ ನೀಡಿದರೆ ಒತ್ತಡರಹಿತ ಜೀವನ ನಡೆಸಬಹುದು. ಇದು ಸಾಧ್ಯ ಎಂದು ತಿಳಿಸಿದರು.

ಕಲಿಯುಗದಿಂದ ಮತ್ತೆ ನಾವು ಸತ್ಯಯುಗಕ್ಕೆ ತೆರಳಬೇಕಿದೆ. ಪ್ರತಿದಿನ ಮನಸ್ಸಿನ ನಿಯಂತ್ರಣಕ್ಕೆ ಒಂದಿಷ್ಟು ಸಮಯ ಕೊಟ್ಟರೆ ನಿಜವಾಗಿಯೂ ವಿಸ್ಮಯವಾದದ್ದನ್ನು ಸಾಧಿಸಬಹುದು ಎಂದು ಹುರಿದುಂಬಿಸಿದರು.

ಭೂಮಿ ಮೇಲೆ ಬಂದ ಎಲ್ಲರೂ ದೇವದೇವತೆಯರು. ನಮಗೆ ಉತ್ತಮ ಸಂಸ್ಕಾರ ಇದೆ. ಇಲ್ಲಿ ಟಿಸುವ ಪ್ರತಿಯೊಂದಕ್ಕೂ ಪರಮಾತ್ಮನ ಇಚ್ಚೆ ಎಂದು ಮೇಲೆ ಬೆರಳು ತೋರಿಸುವ ಬದಲು ಆತ್ಮ ಜಾಗೃತಿ ಮಾಡಿಕೊಳ್ಳಬೇಕು. ಸಂಸ್ಕಾರದಿಂದ ಸಂಸಾರ ಸುಖಮಯವಾಗುತ್ತದೆ ಎಂದು ಶಿವಾನಿ ಅವರು ಪ್ರತಿಪಾದಿಸಿದರು.

ಇಲ್ಲಿ ಎಲ್ಲವೂ ತಾತ್ಕಾಲಿಕ ಎಂಬುದನ್ನು ಅರಿತು ಕ್ಷಮಾ ಗುಣ ಬೆಳೆಸಿಕೊಳ್ಳಬೇಕು. ಅತ್ಯಂತ ಸಣ್ಣ ವಿಷಯಗಳು ಕೂಡ ಮನಸ್ಸಿಗೆ ಖುಷಿ ನೀಡುತ್ತವೆ. ಅಂಥವುಗಳನ್ನು ಮಾಡುತ್ತಲೇ ಜೀವನ ಸುಂದರಗೊಳಿಸಿಕೊಳ್ಳಬೇಕು ಎಂದರು.

ಉಪನ್ಯಾಸ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಅತಿಥಿಗಳಾಗಿ ಶ್ರೀಮತಿ ವಾಣಿ ಆನಂದ ಸಂಕೇಶ್ವರ, ಶಿಲ್ಪಾ ಜಗದೀಶ ಶೆಟ್ಟರ್, ಬಿ. ನಾಗರಾಜರಾವ್, ಜಿತೇಂದ್ರ ಮಜೇಥಿಯಾ, ವಿನಯಚಂದ್ರ ಮಹೇಂದ್ರಕರ, ಎಸ್.ಪಿ. ಸಂಶಿಮಠ, ಶಂಕ್ರಣ್ಣ ಮುನವಳ್ಳಿ, ತಿಲಕ ವಿಕಂಶಿ, ಡಾ. ಬಸವರಾಜ ರಾಜಋಷಿ, ನ್ಯಾ. ಶ್ವೇತಾ ಪಾಟೀಲ, ನ್ಯಾ. ರೋಹಿನಿ ಬಸಾಪುರ, ಬಿ.ಕೆ. ಅಂಬಿಕಾ, ಇತರರು ಭಾಗವಹಿಸಿದ್ದರು.