ಜಿಲ್ಲೆ

ಹೊಮ್ಮ ಶಾಲೆಗೆ ಬಿ.ಜಿ.ಪುಟ್ಟಸ್ವಾಮಿ ಭೇಟಿ

ಪ್ರಸಿನ್ ಕೆ.ಆರ್

ಯಳಂದೂರು: ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಿ.ಜಿ.ಪುಟ್ಟಸ್ವಾಮಿ ಸೋಮವಾರ ಭೇಟಿ ನೀಡಿದರು.

ಈ ಶಾಲೆಯಲ್ಲಿ ದಲಿತ ಮಹಿಳೆಯೊಬ್ಬರು ಅಡುಗೆ ಮಾಡುತ್ತಾರೆ ಎಂಬ ಕಾರಣಕ್ಕೆ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ಟಿಸಿ ಪಡೆದು ಬೇರೆ ಶಾಲೆಗೆ ಸೇರಿಸಿದ್ದಾರೆ ಎಂದು ಇತ್ತೀಚೆಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಜಿ.ಪುಟ್ಟಸ್ವಾಮಿ ನಾನು ಈ ಹಿಂದೆ ಈ ಭಾಗದಲ್ಲಿ ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿದ್ದೆ. ಆದರೆ, ಇಲ್ಲಿ ಎಲ್ಲ ಕೋಮಿನವರು ಅನ್ಯೋನ್ಯವಾಗಿದ್ದಾರೆ. ಈ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಮಹಿಳೆ 20 ವರ್ಷಗಳಿಂದ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾಧ್ಯಮಗಳ ವರದಿಯನ್ನು ಆಧರಿಸಿ ಕೂಡಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ, ಇಲ್ಲಿ ಇಂತಹ ಯಾವುದೇ ಘಟನೆ ಜರುಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಶತಮಾನದ ಹೊಸ್ತಿಲಿನಲ್ಲಿರುವ ಈ ಶಾಲೆಯ ಕಟ್ಟಡ ತುಂಬಾ ಹಳೆಯದಾಗಿದ್ದು, ಶಿಥಿಲವಾಗಿದೆ. ಅಲ್ಲದೆ ಇಲ್ಲಿರುವ ಶಿಕ್ಷಕರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಮಕ್ಕಳಿಗೆ ಸರಿಯಾದ ಶಿಕ್ಷಣ ಲಭಿಸುತ್ತಿಲ್ಲ ಎಂಬ ಕಾರಣದಿಂದ ಮಕ್ಕಳನ್ನು ಶಾಲೆಯಿಂದ ಟಿಸಿ ಪಡೆದಿದ್ದಾರೆ.

ನಾನು ಕೂಡ ಈ ಗ್ರಾಮದ ವಿದ್ಯಾರ್ಥಿಗಳ ಪಾಲಕರೊಂದಿಗೆ ಚರ್ಚಿಸಿದ್ದೇನೆ. ಆದರೆ, ಇಲ್ಲಿ ಇಂತಹ ಯಾವುದೇ ಜನಾಂಗೀಯ ನಿಂದನೆಯ ಘಟನೆಗಳು ನಡೆದಿಲ್ಲ. ಶಾಲೆಯಲ್ಲಿದ್ದ ಶಿಕ್ಷಕರ ನಡುವಿನ ಹೊಂದಾಣಿಕೆಯ ಕೊರತೆಯಿಂದ ಹೀಗಾಗಿದೆ. ಅಲ್ಲದೆ ಶಾಲೆಯೂ ಶಿಥಿಲವಾಗಿದೆ. ಹಾಗಾಗಿ ಈ ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಈಗಾಗಲೇ ಕೆಲ ಶಿಕ್ಷಕರನ್ನು ಬದಲಿಸಲಾಗಿದೆ. ಈಗಿರುವ ಮಾಹಿತಿ ಪ್ರಕಾರ ಅನೇಕ ಪಾಲಕರು ಮತ್ತೆ ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದರೊಂದಿಗೆ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಮತ್ತಷ್ಟು ಕ್ರಮವನ್ನು ವಹಿಸಬೇಕು. ಈ ಘಟನೆಯ ನೆಪವನ್ನು ಇಟ್ಟುಕೊಂಡೇ ಇದನ್ನು ಮಾದರಿ ಶಾಲೆಯಾಗಿ ರೂಪಿಸಿ ಇನ್ನಷ್ಟು ವಿದ್ಯಾರ್ಥಿಗಳು ಈ ಶಾಲೆಗೆ ಆಕರ್ಷಿತರಾಗುವಂತೆ ಮಾಡಬೇಕು ಎಂದರು.

ಇದೇ ಸಂದರ್ಭ ಮಕ್ಕಳಿಗೆ ಸಿಹಿ ವಿತರಿಸಿ ಯೋಗಕ್ಷೇಮ ವಿಚಾರಿಸಿದರು. ಆಲೂರು ಮಲ್ಲು, ಸಂತೆಮರಹಳ್ಳಿ ಶಂಕರಪ್ಪ, ಹೆಗ್ಗವಾಡಿ ಜಗದೀಶ್, ಮಹದೇವಸ್ವಾಮಿ, ಹೊಮ್ಮ ಲೋಕೇಶ್, ರಾಮು, ಸಿದ್ಧಲಿಂಗಸ್ವಾಮಿ, ಚಿಕ್ಕಲಿಂಗಯ್ಯ, ಮಹೇಶ್, ನಾಗ, ಶೇಖರ್, ಪ್ರಕಾಶ್‌ಗೌಡ, ವೈ.ಕೆ.ಮೋಳೆ ಸೋಮಣ್ಣ, ವಡಗೆರೆ ಸುಂದ್ರಣ್ಣ, ಮಲ್ಲಪ್ಪ, ಅಂಬಳೆ ರವೀಶ ಇತರರಿದ್ದರು.