ಕೋಲಾರ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಅಜ್ಞಾನಿಗಳು ಎಂದು ಹೇಳಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡಲೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ನಗರದ ಗಾಂಧಿವನದಲ್ಲಿ ಶನಿವಾರ ಪ್ರತಿಭಟಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ, ಕರೊನಾ ಕಾರಣದಿಂದ ರೈತರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಕೃಷಿ ಸಚಿವರಿಗೆ ಏನು ಗೊತ್ತು , ಸಚಿವರೇ ಅಜ್ಞಾನಿಗಳು ಎಂದು ಟೀಕಿಸಿದರು.
ರೈತರಿಗೆ ಸಂಬಂಧಿಸಿದ ಕಾನೂನು ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ಸರ್ಕಾರ ರೈತರಿಂದ ಭೂಮಿ ಕಿತ್ತುಕೊಳ್ಳಲು ಹೊರಟಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ಎಪಿಎಂಸಿ, ವಿದ್ಯುತ್ ಖಾಸಗಿ ಮಾಡಲು ಹೊರಟಿದ್ದೀರಿ. ಅಧಿಕಾರ ಮತ್ತು ಹಣದ ಆಸೆಯಿಂದ ಪಕ್ಷಾಂತರ ಮಾಡಿರುವ ನೀವು ಭ್ರಷ್ಟಾಚಾರದ ವಿರುದ್ಧ ಮಾತಾಡಿದರೆ ಅಜ್ಞಾನಿಗಳು ಎನ್ನುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಮಾತನಾಡಿ, ರೈತರ ಮತ್ತು ರೈತ ಮುಖಂಡರ ಬಗ್ಗೆ ಮಾತನಾಡಿದ ಯಾವ ರಾಜಕಾರಣಿಗಳು ಅಧಿಕಾರದಲ್ಲಿ ಉಳಿದಿಲ್ಲ. ರೈತ ಕುಟುಂಬದಿಂದ ಬಂದವನು ಎನ್ನುವ ಕೃಷಿ ಸಚಿವರು ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿ ರೈತರಿಗೆ ಮಾರುಕಟ್ಟೆಗಳಲ್ಲಿ ಸರಿಯಾದ ಬೆಲೆ ಸಿಗುತ್ತಿದೆಯಾ ಎಂಬುದು ತಿಳಿದುಕೊಳ್ಳಿ. ನೀವು ಮಾಡುವ ತಪ್ಪುಗಳನ್ನು ಪ್ರಶ್ನೆ ಮಾಡುವವರನ್ನು ಅಜ್ಞಾನಿಗಳು ಎನ್ನುವುದು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಕೂಡಲೆ ರೈತ ಸಮುದಾಯದ ಕ್ಷಮೆ ಕೊರಬೇಕು. ಇಲ್ಲದಿದ್ದರೆ ನೀವು ಭೇಟಿ ನೀಡುವ ಜಿಲ್ಲೆಗಳಲ್ಲಿ ಕಪ್ಪು ಬಾವುಟ ಪ್ರದರ್ಶನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯದರ್ಶಿ ವೀರಾಪುರ ಮಂಜುನಾಥ್, ರವಿ, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ಶ್ರೀರಾಮರೆಡ್ಡಿ, ಕೋಲಾರ ತಾಲೂಕು ಅಧ್ಯಕ್ಷ ದಿನೇಹೊಸಹಳ್ಳಿ ರಮೇಶ್, ಮಾಲೂರು ತಾಲೂಕು ಅಧ್ಯಕ್ಷ ನರಸಿಂಹಯ್ಯ, ಮುಳಬಾಗಿಲು ತಾಲೂಕು ಅಧ್ಯಕ್ಷ ಪಿ.ಎಸ್. ಗಂಗಾಧರ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಗೋಪಿನಾಥ್, ಕೆಜಿಎಪ್ ತಾಲೂಕು ಅಧ್ಯಕ್ಷ ವಿ.ಆರ್. ಲಕ್ಷ್ಮಿನಾರಾಯಣ, ಕೋಲಾರ ಅನಂದ್ ಕುಮಾರ್, ಡಿ.ಎಂ.ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.